ಲೋಕಸಭೆ ಚುನಾವಣೆ : ಕಾಂಗ್ರೆಸ್ ಶಾಸಕರಾದ ಶಾಮನೂರು ಶಿವಶಂಕರಪ್ಪ, ಈಶ್ವರ್‍ಖಂಡ್ರೆ ಮತ್ತು ರಿಜ್ವಾನ್ ಆರ್ಷದ್ ಕಣಕ್ಕೆ

ಬೆಂಗಳೂರು, ಮಾ.22- ಶಾಸಕರಾಗಿರುವ ಶಾಮನೂರು ಶಿವಶಂಕರಪ್ಪ, ಈಶ್ವರ್‍ಖಂಡ್ರೆ, ವಿಧಾನಪರಿಷತ್ ಸದಸ್ಯರಾದ ರಿಜ್ವಾನ್ ಅರ್ಷದ್, ಗೋವಿಂದರಾಜು ಅವರನ್ನು ಲೋಕಸಭೆ ಚುನಾವಣೆ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.

ತುಮಕೂರು ಲೋಕಸಭೆ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿರುವುದರಿಂದ ಮುದ್ದಹನುಮೇಗೌಡ ಟಿಕೆಟ್ ವಂಚಿತರಾಗಿದ್ದಾರೆ.

ಉಳಿದಂತೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲಾಗಿದ್ದು, ಆದರೆ, ಜೆಡಿಎಸ್‍ನಲ್ಲಿ ಅಭ್ಯರ್ಥಿಗಳ ಕೊರತೆ ಇರುವುದರಿಂದ ಮತ್ತೆ ಕಾಂಗ್ರೆಸ್‍ನಿಂದ ಈ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡ ಪ್ರಮೋದ್ ಮಧ್ವರಾಜ್ ಅವರಿಗೆ ಜೆಡಿಎಸ್ ಬಿ ಫಾರಂ ನೀಡಿ ಮಿತ್ರ ಪಕ್ಷಗಳ ಜಂಟಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗುತ್ತಿದೆ.

ಅದೇ ಮಾದರಿಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬಿ.ಎಲ್.ಶಂಕರ್ ಅವರಿಗೆ ಕಾಂಗ್ರೆಸ್ ಬಿ ಫಾರಂ ನೀಡಿ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಪರಿಶೀಲನೆಗಳು ನಡೆಯುತ್ತಿವೆ.

ಉಳಿದಂತೆ ಬಾಗಲಕೋಟೆ, ದಾವಣಗೆರೆ, ಬೀದರ್, ಬೆಂಗಳೂರು ದಕ್ಷಿಣ, ಮೈಸೂರು ಕ್ಷೇತ್ರಕ್ಕೆ ನಿನ್ನೆ ತಡರಾತ್ರಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಏಕ ವ್ಯಕ್ತಿ ಹೆಸರನ್ನು ಅಂತಿಮಗೊಳಿಸಿ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಲಾಗಿದೆ.

ದಕ್ಷಿಣ ಕನ್ನಡ, ಕೊಪ್ಪಳ, ಬೆಳಗಾವಿ, ಹಾವೇರಿ, ಧಾರವಾಡ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಿಗೆ ತಲಾ ಇಬ್ಬರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ.

ಮೈಸೂರಿನಿಂದ ಸಿದ್ದರಾಮಯ್ಯ ಅವರ ಆಪ್ತ ವಿಜಯ್‍ಶಂಕರ್, ಬೀದರ್‍ನಿಂದ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ದಾವಣಗೆರೆಯಿಂದ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ, ಅಭ್ಯರ್ಥಿಗಳ ಕೊರತೆ ಎದುರಿಸುತ್ತಿರುವ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ದಕ್ಷಿಣ ಕನ್ನಡ ಕ್ಷೇತ್ರಕ್ಕೆ ರಮಾನಾಥರೈ ಮತ್ತು ಮಿಥುನ್‍ರೈ ಅವರ ನಡುವೆ ಪೈಪೋಟಿ ಇದೆ. ಮಾಜಿ ಸಂಸದ ಹಾಗೂ ಜಿಲ್ಲಾ ಕಾಂಗ್ರೆಸ್‍ನ ಪ್ರಭಾವಿ ನಾಯಕ ರಮಾನಾಥ್ ರೈ ಅವರು ಲೋಕಸಭೆಗೆ ಟಿಕೆಟ್ ಕೇಳುತ್ತಿದ್ದಾರೆ. ಯುವ ಕಾಂಗ್ರೆಸ್‍ನ ನಾಯಕ ಮಿಥುನ್‍ರೈ ಅವರನ್ನು ಕಣಕ್ಕಿಳಿಸಲು ತಯಾರಿ ನಡೆಸಿದೆ. ಕರಾವಳಿ ಕೋಮು ಸೂಕ್ಷ್ಮ ಭಾಗವಾಗಿದ್ದು, ಈ ಭಾಗದಲ್ಲಿ ಹೊಸ ಮುಖಗಳನ್ನು ಪರಿಚಯಿಸುವ ಮೂಲಕ ಯುವಕರನ್ನು ಆಕರ್ಷಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ.

ಬೆಳಗಾವಿ ಜಿಲ್ಲೆಗೆ ಯುವ ನಾಯಕ ಶಿವಕಾಂತ್ ಸಿದ್ನಾಳ್ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ನಿನ್ನೆ ರಾತ್ರಿ ನಡೆದ ಸಭೆಯಲ್ಲಿ ಮಾಜಿ ಸಂಸದ ಷಣ್ಮುಕಪ್ಪ ಸಿದ್ನಾಳ್ ಅವರ ಪುತ್ರ, ಮಾಜಿ ಸಂಸದ ವಿಜಯ್‍ಸಂಕೇಶ್ವರ್ ಅವರ ಅಳಿಯ ಶಿವಕಾಂತ್ ಸಿದ್ನಾಳ್ ಮತ್ತು ಡಾ.ವಿ.ಎಸ್.ಸಾದನ್ನನವರ್ ಅವರ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ಇಂದು ಬೆಳಗ್ಗೆ ಶಿವಕಾಂತ್ ಸಿದ್ನಾಳ್‍ಗೆ ಟಿಕೆಟ್ ನೀಡಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ. ಉಳಿದಂತೆ ಶಾಸಕಿ ಅಂಜಲಿ ನಿಂಬಾಳ್ಕರ್ ಮತ್ತು ವಿಧಾನಪರಿಷತ್ ಸದಸ್ಯ ವಿವೇಕ್‍ರಾವ್ ಪಾಟೀಲ್ ಅವರುಗಳೂ ಆಕಾಂಕ್ಷಿಯಾಗಿದ್ದರು.

ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ ರಾಜಶೇಖರ್ ಹಿಟ್ನಾಳ್ ಮತ್ತು ವಿರೂಪಾಕ್ಷಪ್ಪ ನಡುವೆ ಪ್ರಬಲ ಪೈಪೋಟಿ ಇದ್ದು, ಸಿದ್ದರಾಮಯ್ಯ ಅವರು ಸೂಚಿಸುವ ಅಭ್ಯರ್ಥಿಗೆ ಟಿಕೆಟ್ ಘೋಷಣೆಯಾಗಲಿದೆ. ಮಾಜಿ ಸಚಿವ ಎಚ್.ವೈ.ಮೇಟಿ ಅವರ ಪುತ್ರಿ ಬಾಯಕ್ಕ ಮೇಟಿ ಅವರು ಈ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿದ್ದರು.

ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ವಿನಯ್‍ಕುಲಕರ್ಣಿ, ಕಾಂಗ್ರೆಸ್ ಹಿರಿಯ ನಾಯಕ ಐ.ಜಿ.ಸನದಿ ಅವರ ಪುತ್ರ ಶಾಕೀರ್ ಸನದಿ ಅವರ ನಡುವೆ ಪೈಪೋಟಿ ಇದೆ.

ಹಾವೇರಿ ಕ್ಷೇತ್ರಕ್ಕೆ ಈವರೆಗೂ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಲಾಗುತ್ತಿತ್ತು. ಈ ಬಾರಿ ಬದಲಾವಣೆ ಮಾಡಿ ಲಿಂಗಾಯಿತ ಸಮುದಾಯದ ಬಸವರಾಜ್ ಶಿವಣ್ಣನವರ್ ಅಥವಾ ಡಿ.ಆರ್. ಪಾಟೀಲ್ ಅವರಿಗೆ ಟಿಕೆಟ್ ನೀಡಲು ಚರ್ಚೆ ನಡೆಯುತ್ತಿದೆ. ಹೀಗಾಗಿ ಧಾರವಾಡ ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗಿತ್ತಾದರೂ ಕೊನೆ ಕ್ಷಣದಲ್ಲಿ ಶಾಸಕ ರೋಷನ್ ಬೇಗ್ ಅವರು ಹೆಚ್ಚಿನ ಒತ್ತಡ ಹೇರಿದ್ದರಿಂದ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಕೇಂದ್ರ ಚುನಾವಣಾ ಸಮಿತಿಗೆ ಬಿಡಲಾಗಿದೆ.
ದಾವಣಗೆರೆ ಕ್ಷೇತ್ರದಿಂದ ಶಾಸಕ ಶಾಮನೂರು ಶಿವಶಂಕರಪ್ಪ ಕಣಕ್ಕಿಳಿದರೆ, ಬಾಗಲಕೋಟೆಯಿಂದ ವೀಣಾ ಕಾಶಪ್ಪನವರ್ ಕಣಕ್ಕಿಳಿಯುತ್ತಿದ್ದಾರೆ.

ಹಾಲಿ ಸಂಸದರು
1. ಚಿಕ್ಕೋಡಿ-ಪ್ರಕಾಶ್ ಹುಕ್ಕೇರಿ
2. ಕಲಬುರ್ಗಿ- ಮಲ್ಲಿಕಾರ್ಜುನ ಖರ್ಗೆ
3. ರಾಯಚೂರು- ಬಿ.ವಿ.ನಾಯಕ್
4. ಬಳ್ಳಾರಿ-ವಿ.ಎಸ್.ಉಗ್ರಪ್ಪ
5. ಚಿತ್ರದುರ್ಗ- ಬಿ.ಎನ್.ಚಂದ್ರಪ್ಪ
6. ಚಾಮರಾಜನಗರ- ಆರ್.ಧ್ರುವನಾರಾಯಣ್
7. ಬೆಂಗಳೂರು ಗ್ರಾಮಾಂತರ-ಡಿ.ಕೆ.ಸುರೇಶ್
8. ಚಿಕ್ಕಬಳ್ಳಾಪುರ- ಎಂ.ವೀರಪ್ಪಮೊಯ್ಲಿ
9. ಕೋಲಾರ- ಕೆ.ಎಚ್.ಮುನಿಯಪ್ಪ
ಸಂಭವನೀಯ ಅಭ್ಯರ್ಥಿಗಳು
1. ಮೈಸೂರು- ವಿಜಯ್‍ಶಂಕರ್
2. ಬಾಗಲಕೋಟೆ-ವೀಣಾ ಕಾಶಪ್ಪನವರ್
3. ಬೀದರ್-ಈಶ್ವರ್‍ಖಂಡ್ರೆ
4. ಬೆಂಗಳೂರು ದಕ್ಷಿಣ-ಗೋವಿಂದರಾಜು
5. ದಾವಣಗೆರೆ-ಶಾಮನೂರು ಶಿವಶಂಕರಪ್ಪ
6. ಹಾವೇರಿ- ಶಿವಣ್ಣನವರ್/ಡಿ.ಆರ್.ಪಾಟೀಲ್
7. ಕೊಪ್ಪಳ-ರಾಜಶೇಖರ ಹಿಟ್ನಾಳ್/ವಿರೂಪಾಕ್ಷಪ್ಪ
8. ಬೆಳಗಾವಿ-ಶಿವಕಾಂತ್ ಸಿದ್ನಾಳ್/ಡಾ.ವಿ.ಎಸ್.ಸಾಧುನವರ್
9. ಧಾರವಾಡ- ಶಾಕೀರ್ ಸನ್ನಧಿ/ವಿನಯ್ ಕುಲಕರ್ಣಿ
10. ದಕ್ಷಿಣ ಕನ್ನಡ- ಮಿಥುನ್‍ರೈ/ರಮಾನಾಥ್‍ರೈ
11. ಬೆಂಗಳೂರು ಕೇಂದ್ರ-ರಿಜ್ವಾನ್ ಅರ್ಷದ್/ ಆರ್.ರೋಷನ್‍ಬೇಗ್

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ