ಮಂಡ್ಯ: ಮಂಡ್ಯ ಲೋಕಸಭಾ ಚುನಾವಣಾ ಕಣ ಜಿದ್ದಾಜಿದ್ದಿಗೆ ಸಾಕ್ಷಿಯಾಗುತ್ತಿದೆ. ಈಗಾಗಲೇ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಸಿದ್ದು, ನಿನ್ನೆಯೇ ಬಹಿರಂಗ ಸಮಾವೇಶದ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಬುಧವಾರ ಸುಮಲತಾ ನಾಮಪತ್ರದ ಜತೆಗೆ ನೀಡಲಾಗಿರುವ ಅಫಿಡವಿಟ್ನಲ್ಲಿ ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ. ಒಟ್ಟು ತಾವು 42.49 ಕೋಟಿ ರೂ. ವೌಲ್ಯದ ಸ್ಥಿರ ಮತ್ತು ಚರಾಸ್ತಿಯನ್ನು ಹೊಂದಿರುವುದಾಗಿ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ನಮ್ಮ ಕುಟುಂಬ ಸರ್ಕಾರಕ್ಕೆ ಯಾವುದೇ ಬಾಕಿ ನೀಡಬೇಕಿಲ್ಲ. ನಮ್ಮ ಯಾವುದೇ ಕ್ರಮಿನಿಲ್ ಕೇಸುಗಳು ದಾಖಲಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ಧಾರೆ. ಜತೆಗೆ ಬೇರೆ ಮೂಲಗಳಿಂದ ತಾವು 1.33 ಕೋಟಿ ಸಾಲ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಕೈಯಲ್ಲಿ ಕೇವಲ 13 ಲಕ್ಷ ರೂ, ಹಾಗೆಯೇ 1.66 ಕೋಟಿ ರೂ. ಮೌಲ್ಯದ ಬರೋಬ್ಬರಿ 5.5 ಕಿ.ಲೋ ಬಂಗಾರ, 12.57 ಲಕ್ಷ ರೂ. ಮೌಲ್ಯದ 31 ಕಿಲೋ ಬೆಳ್ಳಿಯನ್ನು ಹೊಂದಿರುವುದಾಗಿ ಘೋಷಿಸಿದ್ದಾರೆ.
ಇನ್ನು ವಿವಿಧ ಬ್ಯಾಂಕುಗಳ ಖಾತೆಗಳಲ್ಲಿ 1.33 ಕೋಟಿ, ಅಂಬರೀಶ್ ಖಾತೆಯಲ್ಲಿ 83 ಲಕ್ಷ, ಮತ್ತು ಎಸ್ಬಿಐ ಖಾತೆ ಸೇರಿದಂತೆ ಐದು ಬ್ಯಾಂಕ್ಗಳಲ್ಲಿ 2 ಕೋಟಿ ಠೇವಣಿ ಇಡಲಾಗಿದೆ. ಬೆಂಗಳೂರಿನಲ್ಲಿರುವ ಜೆ.ಪಿ.ನಗರದ ಮನೆ, ಉತ್ತರಹಳ್ಳಿಯ ಮನೆ, ಅಪಾರ್ಟ್ಮೆಂಟ್ ಸೇರಿದಂತೆ 18 ಕೋಟಿ ರೂ ಸ್ಥಿರಾಸ್ತಿ ಹೊಂದಿದ್ದಾರೆ. ಜತೆಗೆ 16 ಕೋಟಿ ಪಿತ್ರಾಜಿತ ಆಸ್ತಿ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.
ಸುಮಲತಾ ನಾಮಪತ್ರ ಸಲ್ಲಿಕೆ ವೇಳೆ ನಿನ್ನೆ ಎಲ್ಲಾ ಸಮುದಾಯದ ಮುಖಂಡರು ಜೊತೆಯಾಗಿದ್ದರು. ಪ್ರಮುಖವಾಗಿ ‘ಅಹಿಂದ’ ನಾಯಕರು ಆಗಮಿಸಿ ಬೆಂಬಲಸಿದ್ದು, ತುಂಬಾ ವಿಶೇಷವಾಗಿತ್ತು. ದಲಿತ, ಕುರುಬ ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಸ್ಪರ್ಧಿಸಲು ಅನುಮೋದನೆ ನೀಡಿದ್ದಾರೆ. ಇವರನ್ನ ಪ್ರತಿನಿಧಿಸಿಯೇ ನಾಮಪತ್ರ ಸಲ್ಲಿಸುತ್ತಿದ್ದೇನೆ. ಮಂಡ್ಯ ಜನ ನಮ್ಮನ್ನು ಗೆಲ್ಲಿಸುತ್ತಾರೆಂಬ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಅಂಬರೀಶ್ ಪತ್ನಿ.
ಈಗಾಗಲೇ ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭೆ ಕ್ಷೇತ್ರ ನಿನ್ನೆಯಿಂದಲೇ ಮತ್ತಷ್ಟು ರಂಗೇರಿದೆ. ಅತ್ತ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ, ಇತ್ತ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣದಲ್ಲಿದ್ದಾರೆ. ಸುಮಲತಾ ಅಂಬರೀಶ್ ಪರ ಇಡೀ ಚಿತ್ರರಂಗವೇ ನಿಂತಿದ್ದು, ಜೆಡಿಎಸ್ ವರಿಷ್ಠರಿಗೆ ನುಂಗಲಾರದ ತುತ್ತಾಗಿದೆ ಎಂದರೇ ತಪ್ಪಾಗಲಿಕ್ಕಿಲ್ಲ.