ಕಾರ್ಯಕರ್ತರು ಒಗ್ಗಟ್ಟಾಗಿ ಚುನಾವಣೆ ಎದುರಿಸಿದರೆ ಹ್ಯಾಟ್ರಿಕ್ ಗೆಲವು ಖಚಿತ-ಸಂಸದ ಆರ್.ಧ್ರುವನಾರಾಯಣ್

ಹನೂರು, ಮಾ.20- ಚಾಮರಾಜನಗರ ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿದ್ದು, ಭಿನ್ನಾಭಿಪ್ರಾಯ ಮರೆತು ಗುಂಪುಗಾರಿಕೆಗೆ ಅವಕಾಶ ನೀಡಿದೆ ಕಾರ್ಯಕರ್ತರು ಒಗ್ಗಟ್ಟಾಗಿ ಚುನಾವಣೆ ಎದುರಿಸಿದರೆ ಹ್ಯಾಟ್ರಿಕ್ ಗೆಲುವು ಖಚಿತ ಎಂದು ಸಂಸದ ಆರ್.ಧೃವನಾರಾಯಣ್ ಹೇಳಿದರು.

ಪಟ್ಟಣದಲ್ಲಿ ಮುಖಂಡರು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚಾಮರಾಜ ನಗರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಎಂಟು ವಿಧಾನಸಭಾ ಕ್ಷೇತ್ರಗಳು ಸೇರುತ್ತಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹಾಗೆಯೇ ಜಿಪಂ, ತಾಪಂ, ನಗರ ಸಭೆ, ಪುರಸಭೆ, ಪಪಂ ಮತ್ತು ಗ್ರಾಮ ಸಭೆಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರ ನಡೆಸುತ್ತಿದೆ. ಎರಡು ಬಾರಿ ಶಾಸಕನಾಗಿ ಮತ್ತು ಎರಡು ಬಾರಿ ಸಂಸದನಾಗಿ ಹಲವು ಜನಪರ ಕೆಲಸ-ಕಾರ್ಯಗಳನ್ನು ಮಾಡಿದ್ದೇನೆ ಹಾಗೂ ಕ್ಷೇತ್ರದ ಮತದಾರರನ್ನು ಅತ್ಯಂತ ಗೌರವದಿಂದ ನೋಡಿ ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿದರು.

ಆದರೆ, ಕೇಂದ್ರದಲ್ಲಿ ಐದು ವರ್ಷ ಆಡಳಿತ ನಡೆಸಿರುವ ನರೇಂದ್ರ ಮೋದಿಯವರು ಕೃಷಿಯನ್ನು ಕಡೆಗಣಿಸುವ ಮೂಲಕ ರೈತಾಪಿ ವರ್ಗ ಬೆಳೆದ ಬೆಳೆಗೆ ಬೆಂಬಲ ನೀಡದೆ ಅನ್ಯಾಯ ಮಾಡಿದೆ. ಮತ್ತೆ ಅಧಿಕಾರಕ್ಕೆ ಬರುವ ಆಸೆಯಿಂದ ರೈತರಿಗೆ ಮೂರು ಕಂತುಗಳಲ್ಲಿ ಆರು ಸಾವಿರ ರೂ.ಗಳನ್ನು ಖಾತೆಗೆ ಹಾಕುತ್ತೇನೆಂದು ಹೇಳಿ ಅದನ್ನು ಹಾಕದೆ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.

ಸೈನಿಕರ ಹೋರಾಟವನ್ನು ಯುಪಿಎ ಸ್ವಾಗತಿಸುತ್ತದೆ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಇಂತಹ ಕೃತ್ಯಗಳು ನಡೆದಿರುವ ಉದಾಹಣೆ ಇಲ್ಲ. ಮೋದಿ ಸರ್ಕಾರದಲ್ಲಿ ಜನರಿಗೆ ರಕ್ಷಣೆ ಇಲ್ಲ ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಆರ್.ನರೇಂದ್ರ ಮಾತನಾಡಿ, ಇದು ವ್ಯಕ್ತಿಗತ ಚುನಾವಣೆಯಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿದ್ದು, ಎಲ್ಲರೂ ದೇಶದ ಭದ್ರತೆಗಾಗಿ ಹೋರಾಟ ಮಾಡಬೇಕು. ಬಿಜೆಪಿಯವರು ಚುನಾವಣೆ ಬಂದಾಗ ಮಾತ್ರ ಶ್ರೀರಾಮನ ಜಪ ಮಾಡುತ್ತಾರೆ. ಗೆದ್ದ ಮೇಲೆ ಮರೆತು ಬಿಡುವ ಇವರು ಇಡೀ ವಿಶ್ವವೇ ಮೆಚ್ಚಿ ಕೊಂಡಿರುವ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‍ರವರು ರಚಿಸಿದ ಸಂವಿಧಾನವನ್ನೇ ಬದಲಾಯಿಸುವುದಕ್ಕೆ ಮುಂದಾಗಿದ್ದಾರೆ. ಇವರಿಂದ ದೇಶದ ಅಭಿವೃದ್ದಿ ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ,ಮಾಜಿ ಪ್ರಧಾನಿ ಮನಮೋಹನ್‍ಸಿಂಗ್ ಅವರ 10 ವರ್ಷ ಅವಧಿಯ ಆಡಳಿತ, ಜನಪರ ಕಾರ್ಯಕ್ರಮಗಳು ಮತ್ತು ಹಿಂದಿನ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳು ಚುನಾವಣೆಗೆ ಶ್ರೀರಕ್ಷೆಯಾಗಲಿದೆ. ನಮ್ಮ ಅಭ್ಯರ್ಥಿ ಗೆಲುವಿಗೆ ಸಹಾಯಕಾರಿಯಾಗಲಿದೆ ಮತ್ತು ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಧೃವನಾರಾಯಣ್ ಸಂಪುಟದಲ್ಲಿ ಮಂತ್ರಿಯಾಗಲಿದ್ದಾರೆ.ಎಂದರು.

ವರುಣಾ ಕ್ಷೇತ್ರದ ಶಾಸಕ ಯತಿಂದ್ರ ಸಿದ್ದರಾಮಯ್ಯ ಮಾತನಾಡಿದರು. ಹೆಚ್‍ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಮಾಜಿ ಶಾಸಕ ಬಾಲರಾಜ್, ಕೃಷ್ಣಮೂರ್ತಿ, ಜಿಪಂ ಅಧ್ಯಕ್ಷೆ ಶಿವಮ್ಮ, ಸದಸ್ಯ ಬಸವರಾಜು, ತಾಪಂ ಅಧ್ಯಕ್ಷ ರಾಜೇಂದ್ರ, ಸದಸ್ಯ ಜಾವಾದ್ ಅಹಮದ್, ನಟರಾಜು, ಚಾಮುಲ್ ಅಧ್ಯಕ್ಷ ಗುರುಮಲ್ಲಪ್ಪ, ಮುಖಂಡರಾದ ಗಣೇಶ್‍ಪ್ರಸಾದ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್‍ದೊರೈರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಂಪಯ್ಯ, ಈಶ್ವರ್ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ