ಕಟ್ಟಡ ಕುಸಿತ ಪ್ರಕರಣ-ಐದು ಮಂದಿಯ ಸಾವು

ಧಾರವಾಡ,ಮಾ.20- ಇಲ್ಲಿನ ಕುಮಾರೇಶ್ವರ ನಗರದಲ್ಲಿ ಕಟ್ಟಡ ಕುಸಿತ ಪ್ರಕರಣದಲ್ಲಿ ಈವರೆಗೆ 5 ಜನ ಮೃತಪಟ್ಟಿದ್ದು, ಕಾರ್ಯಾಚರಣೆ ವೇಳೆ 55 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಗೃಹ ರಕ್ಷಕ ದಳ ಮತ್ತು ಅಗ್ನಿಶಾಮಕ ದಳದ ಪೊಲೀಸ್ ಮಹಾನಿರ್ದೇಶಕ ಎಂ.ಎನ್.ರೆಡ್ಡಿ ತಿಳಿಸಿದರು.

ನಿನ್ನೆ ಧಾರವಾಡದಲ್ಲಿ ಸಂಭವಿಸಿದ ಕಟ್ಟಡ ದುರಂತದ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಅಧಿಕೃತ ಮಾಹಿತಿ ನೀಡಿದ ಅವರು, ಒಂದು ಅಂದಾಜಿನ ಪ್ರಕಾರ ಕಟ್ಟಡದ ತಳಭಾಗದಲ್ಲಿ 15ರಿಂದ 20 ಜನ ಸಿಲುಕಿಕೊಂಡಿರುವ ಸಾಧ್ಯತೆಯಿದೆ. ರಾಜ್ಯದಿಂದ ಎಸ್‍ಡಿಆರ್‍ಎಫ್ ಹಾಗೂ ಕೇಂದ್ರದಿಂದ ಎನ್‍ಡಿಆರ್‍ಎಫ್ ಕರೆಯಿಸಲಾಗಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.

ಕಟ್ಟಡದ ಅವಶೇಷಗಳ ನಾಲ್ಕೂ ಕಡೆಗಳಲ್ಲಿ ಜನ ಇದ್ದಾರೆ ಎಂಬ ಸುಳಿವು ಸಿಕ್ಕಿದ್ದು, ಅವರನ್ನು ರಕ್ಷಣೆ ಮಾಡುವುದು ನಮ್ಮ ಮೊದಲ ಕರ್ತವ್ಯ ಎಂದು ಅವರು ಹೇಳಿದರು.

ಎಸ್‍ಡಿಆರ್‍ಎಫ್‍ನಿಂದ 45ಜನ, ಎನ್‍ಡಿಆರ್‍ಎಫ್‍ನಿಂದ 110 ಜನ, 8 ರಕ್ಷಣಾ ತಂಡ ಕಾರ್ಯಾಚರಣೆ ಮಾಡುತ್ತಿವೆ. 230 ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದಾರೆ.ನಿನ್ನೆ ರಾತ್ರಿ ಕಟ್ಟಡದ ಮಾಲೀಕರ ಮೇಲೆ 304 ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದ್ದು, ಅದಕ್ಕಾಗಿ ಒಂದು ತಂಡ ರಚನೆ ಮಾಡಿ ಸದ್ಯದಲ್ಲೇ ಅವರನ್ನು ಬಂಧಿಸಲಿದ್ದೇವೆ ಎಂದರು.

ಕಟ್ಟಡ ಕಾರ್ಯಾಚರಣೆಯಲ್ಲಿ ಪ್ರತಿಯೊಂದು ನಮಗೆ ಸವಾಲಾಗಿದೆ.ಕೊನೆಯ ವ್ಯಕ್ತಿಯನ್ನು ರಕ್ಷಣೆ ಮಾಡುವವರೆಗೆ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಎಂ.ಎನ್.ರೆಡ್ಡಿ ಹೇಳಿದರು.

ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್, ಜಿಲ್ಲಾಧಿಕಾರಿ ದೀಪಾ ಚೋಳನ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಐಜಿ ರವಿಕಾಂತೇಗೌಡ, ಎಸ್‍ಪಿ ಜಿ.ಸಂಗೀತ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ