ನೀವು ಗೆದ್ದಿರುವ ಕ್ಷೇತ್ರಗಳನ್ನು ಮೊದಲು ಉಳಿಸಿಕೊಳ್ಳಿ-ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ

ಬೆಂಗಳೂರು,ಮಾ.20-ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡಂಕಿ ದಾಟುತ್ತದೆಯೋ ಇಲ್ಲವೋ ಎಂಬ ಚಿಂತೆ ಬೇಡ. ಮೊದಲು ಜೆಡಿಎಸ್ ಗೆದ್ದಿರುವ ಎರಡು ಸ್ಥಾನಗಳನ್ನು ಉಳಿಸಿಕೊಳ್ಳಲಿ ಎಂದು ಮಾಜಿ ಪ್ರಧಾನಿ ದೇವೇಗೌಡರಿಗೆ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ದೇವೇಗೌಡರು ಪ್ರಧಾನಿಯಾಗಿದ್ದವರು.ತಮ್ಮ ಸ್ಥಾನಕ್ಕೆ ತಕ್ಕಂತೆ ಅವರು ಮಾತನಾಡಬೇಕು.ಬಿಜೆಪಿ ಎರಡಂಕಿ ದಾಟಲು ಬಿಡುವುದಿಲ್ಲ ಎಂದು ಹೇಳುವುದು ಸರಿಯಲ್ಲ. ನೀವು ಗೆದ್ದಿರುವ ಎರಡು ಕ್ಷೇತ್ರಗಳನ್ನು ಮೊದಲು ಉಳಿಸಿಕೊಳ್ಳಿ. ಆನಂತರ ನಮ್ಮ ಪಕ್ಷದ ಬಗ್ಗೆ ಮಾತನಾಡಲಿ ಎಂದು ಪತ್ರಿಕಾಗೋಷ್ಟಿಯಲ್ಲಿ ತಿರುಗೇಟು ನೀಡಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿರುವುದು ಕೇವಲ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಬಿಜೆಪಿ 17 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 9 ಸ್ಥಾನ, ಜೆಡಿಎಸ್ 2 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತ್ತು.ಇದನ್ನು ಎರಡೂ ಪಕ್ಷಗಳ ನಾಯಕರು ಮರೆಯಬಾರದು ಎಂದು ಹೇಳಿದರು.

ಕಾಂಗ್ರೆಸ್-ಜೆಡಿಎಸ್ ನಾಯಕರು ಏನೇ ಹೇಳಿಕೊಂಡರೂ ಈ ಬಾರಿ ನಾವು 20-25 ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವ ಅನುಮಾನವಿಲ್ಲ. ಮೈತ್ರಿ ಮಾಡಿಕೊಂಡ ತಕ್ಷಣ ಜನರು ಒಪ್ಪಿಕೊಳ್ಳುವುದಿಲ್ಲ. ಅನೇಕ ಕಡೆ ಒಬ್ಬರಿಗೊಬ್ಬರು ಬಡಿದಾಡಿಕೊಳ್ಳುತ್ತಿದ್ದಾರೆ.ಇಂಥವರು ನಮ್ಮಪಕ್ಷದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ತೋರಿಕೆಗೆ ಮಾತ್ರ ಒಬ್ಬರಿಗೊಬ್ಬರು ಕೈ ಜೋಡಿಸಿಕೊಂಡಿದ್ದಾರೆ. ಕಾಂಗ್ರೆಸ್‍ನಲ್ಲೇ ಅನೇಕ ಗುಂಪುಗಳಾಗಿವೆ. ಒಬ್ಬರು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಹೊಗಳಿದರೆ ಇನ್ನೊಬ್ಬರು ಸಿದ್ದರಾಮಯ್ಯನವರನ್ನು ಹೊಗಳುತ್ತಾರೆ.ಸದ್ಯಕ್ಕೆ ಚೂರಿ ಹಾಕಿಕೊಂಡಿಲ್ಲವಷ್ಟೇ ಎಂದು ವ್ಯಂಗ್ಯವಾಡಿದರು.

8 ಕ್ಷೇತ್ರಗಳಲ್ಲಿ ಜೆಡಿಎಸ್, 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕರು ಸ್ಪರ್ಧಿಸಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿಗಳನ್ನು ಜೆಡಿಎಸ್‍ನವರು, ಜೆಡಿಎಸ್ ಅಭ್ಯರ್ಥಿಗಳನ್ನು ಕಾಂಗ್ರೆಸ್‍ನವರು ಸೋಲಿಸುತ್ತಾರೆ.ಫಲಿತಾಂಶದವರೆಗೆ ಕಾದು ನೋಡಿ ಎಂದರು.

ಕರ್ನಾಟಕದಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸಿದರೆ ನಮಗೇನು ಸಮಸ್ಯೆಯಿಲ್ಲ. ಇದರಿಂದಲೇ ಕಾಂಗ್ರೆಸ್ ಯಾವ ಸ್ಥಿತಿಗೆ ಬಂದಿದೆ ಎಂಬುದು ಗೊತ್ತಾಗುತ್ತದೆ. ರಾಹುಲ್ ಗಾಂಧಿ ಅಲ್ಲ ಸ್ವರ್ಗದಿಂದ ಇಂದಿರಾ ಗಾಂಧಿಯೇ ಬಂದರೂ ನಮಗ್ಯಾವ ತೊಂದರೆಯಿಲ್ಲ. ಬಿಜೆಪಿಗೆ ಕಾರ್ಯಕರ್ತರ ಪಡೆ ಇರುವುದರಿಂದ ನಾವು ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಎಂದು ಸಿದ್ದರಾಮಯ್ಯನವರು ಪದೇ ಪದೇಹೇಳುತ್ತಿದ್ದಾರೆ.ಮೊದಲು ಅವರಿಗೆ ಅದು ಇದೆಯೇ ಎಂಬುದನ್ನು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್, ವಕ್ತಾರ ಎ.ಎಚ್.ಆನಂದ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ