ವಿರೋಧದ ನಡುವೆಯೂ ಹಾಲಿ ಸಂಸದರಿಗೆ ಮಣೆ ಹಾಕಿದ ಬಿಜೆಪಿ

ಬೆಂಗಳೂರು,ಮಾ.20-ಶಾಸಕರು ಮತ್ತು ಸ್ಥಳೀಯರ ವಿರೋಧದ ನಡುವೆಯೂ ಬಿಜೆಪಿ ಹಾಲಿ ಸಂಸದರಿಗೆ ಪುನಃ ಮಣೆ ಹಾಕಿದ್ದು, ಇಂದು ಸಂಜೆ ಮೊದಲ ಹಂತದ ಪಟ್ಟಿ ಬಿಡುಗಡೆಯಾಗಲಿದೆ.

ಕಳೆದ ರಾತ್ರಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್ ಮತ್ತಿರರು ಸಭೆ ಸೇರಿ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ.

ತಡರಾತ್ರಿವರೆಗೂ ನಡೆದ ಸಭೆಯಲ್ಲಿ ಹಾಲಿ 15 ಸಂಸದರಿಗೆ ಟಿಕೆಟ್ ಖಾತರಿಯಾಗಿದೆ.ತೀವ್ರ ಕಗ್ಗಂಟಾಗಿ ಪರಿಣಮಿಸಿರುವ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಹೊಣೆಗಾರಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಅಂತಿಮಗೊಳಿಸಲಿದ್ದಾರೆ.

ಉಡುಪಿ-ಚಿಕ್ಕಮಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬಾರದು ಎಂದು ಶಾಸಕರು ಮತ್ತು ಪಕ್ಷದ ಮುಖಂಡರು ಒತ್ತಡ ಹಾಕಿದ್ದರು.

ಆದರೆ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಿದರೆ ಇದೇ ರೀತಿ ಇನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೊಬ್ಬರಿಗೆ ಟಿಕೆಟ್ ನೀಡಬೇಕಾಗುತ್ತದೆ ಎಂಬ ಕಾರಣಕ್ಕಾಗಿ 15 ಸಂಸದರಿಗೆ ಟಿಕೆಟ್ ನೀಡಲು ಕೇಂದ್ರ ಚುನಾವಣಾ ಸಮಿತಿ ತೀರ್ಮಾನಿಸಿದೆ.

ದಕ್ಷಿಣ ಕನ್ನಡದಲ್ಲಿ ನಳಿನ್‍ಕುಮಾರ್ ಕಟೀಲ್‍ಗೂ ಟಿಕೆಟ್ ನೀಡಬಾರದೆಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಆರ್‍ಎಸ್‍ಎಸ್ ಅವರ ಬೆನ್ನಿಗೆ ನಿಂತಿದ್ದರಿಂದ ಅನಿವಾರ್ಯವಾಗಿ ಮಣೆ ಹಾಕಲಾಗಿದೆ.

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಪ್ರತಿನಿಧಿಸುವ ಉತ್ತರ ಕನ್ನಡ ಜಿಲ್ಲೆಯಲ್ಲೂ ಅನಂತಕುಮಾರ್ ಹೆಗಡೆಗೂ ಟಿಕೆಟ್ ನೀಡಬಾರದೆಂಬ ಕೂಗು ಕೇಳಬಂದಿತ್ತು.

ಉಗ್ರ ಹಿಂದುತ್ವವಾದವನ್ನು ಪ್ರತಿಪಾದನೆ ಮಾಡುವಂಥವರಿಗೆ ಟಿಕೆಟ್ ಕೈತಪ್ಪಿದರೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂಬ ಕಾರಣಕ್ಕಾಗಿ ವಿಧಿಯಿಲ್ಲದೆ ಹೆಗಡೆಗೆ ಟಿಕೆಟ್ ನೀಡಲಾಗಿದೆ.

ವಿಜಾಪುರದಲ್ಲಿ ರಮೇಶ್ ಜಿಗಜಿಣಗಿ, ಬಾಗಲಕೋಟೆಯಲ್ಲಿ ಗದ್ದಿಗೌಡರ್, ಕೊಪ್ಪಳದಲ್ಲಿ ಕರಡಿ ಸಂಗಣ್ಣಗೂ ಟಿಕೆಟ್ ಕೊಡಬಾರದೆಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಶೋಭಾ ಕರಂದ್ಲಾಜೆ ಅವರಿಗೆ ತುಮಕೂರಿನಿಂದ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನುಪಕ್ಷದ ಕೆಲವು ನಾಯಕರೇ ವರಿಷ್ಠರ ಮುಂದಿಟ್ಟಿದ್ದರು. ನನಗೆ ಉಡುಪಿ -ಚಿಕ್ಕಮಗಳೂರಿನಿಂದಲೇ ಟಿಕೆಟ್ ನೀಡಿದರೆ ಮಾತ್ರ ಸ್ಪರ್ಧಿಸುತ್ತೇನೆ ಎಂದು ಪಟ್ಟು ಅವರು ಹಿಡಿದಿದ್ದಾರೆ.

ಕಗ್ಗಂಟಾದ ಕ್ಷೇತ್ರಗಳು:
ಬಳ್ಳಾರಿ,ಚಿಕ್ಕೋಡಿ, ರಾಯಚೂರು, ಚಿತ್ರದುರ್ಗ, ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂಬುದರ ಬಗ್ಗೆ ಪಕ್ಷದಲ್ಲೇ ಗೊಂದಲ ಉಂಟಾಗಿದೆ.

ಬಳ್ಳಾರಿಯಲ್ಲಿ ವೆಂಕಟೇಶ್ ಪ್ರಸಾದ್, ದೇವೇಂದ್ರಪ್ಪ , ಚಿಕ್ಕೋಡಿಯಲ್ಲಿ ರಮೇಶ್ ಕತ್ತಿ, ಪ್ರಭಾಕರ್ ಕೋರೆ, ಕೋಲಾರದಲ್ಲಿ ಛಲವಾದಿ ನಾರಾಯಣಸ್ವಾಮಿ, ಡಿ.ಎಸ್.ವೀರಯ್ಯ, ಚಿತ್ರದುರ್ಗದಲ್ಲಿ ಮಾನಪ್ಪ ವಜ್ಜಲ್, ಎ.ನಾರಾಯಣಸ್ವಾಮಿ ಆಕಾಂಕ್ಷಿಗಳಾಗಿದ್ದಾರೆ.

ಈ ಕ್ಷೇತ್ರಗಳಿಗೆ ಇನ್ನೊಂದು ಸುತ್ತಿನ ಸಭೆ ನಡೆಸಿದ ಬಳಿಕ ಪ್ರಧಾನಿಯವರೇ ಯಾರಿಗೆ ಟಿಕೆಟ್ ನೀಡಬೇಕೆಂಬುದನ್ನು ತೀರ್ಮಾನಿಸಲಿದ್ದಾರೆ.

ಇನ್ನು ಹಾಸನದಿಂದ ಮಾಜಿ ಸಚಿವ ಎ.ಮಂಜು, ಬೆಂಗಳೂರು ದಕ್ಷಿಣದಿಂದ ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್, ಚಾಮರಾಜನಗರದಿಂದ ವಿ.ಶ್ರೀನಿವಾಸ್ ಪ್ರಸಾದ್ ಅಖಾಡಕ್ಕಿಳಿಯಲಿದ್ದಾರೆ.

ಕೆಲ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಬಗ್ಗೆ ರಾಜ್ಯ ನಾಯಕರಿಂದ ವಿರೋಧ ವ್ಯಕ್ತವಾಗಿದ್ದು, 28 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.

28 ಕ್ಷೇತ್ರಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆದಿದೆ.ಗೆಲುವಿನ ಮಾನದಂಡದ ಮೇಲೆ ಒಂದೊಂದು ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆಸಿ, ಅಭಿಪ್ರಾಯ ಸಂಗ್ರಹಿಸಲಾಗಿದೆ.ಕೆಲವು ಕ್ಷೇತ್ರ ಅಂತಿಮ ಆಗಿದೆ, ಕೆಲವು ಕ್ಷೇತ್ರಗಳು ಚರ್ಚೆಯಾಗಬೇಕಿದೆ.ಅಂತಿಮವಾಗಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

ಅಭ್ಯರ್ಥಿಗಳ ಪಟ್ಟಿ :
ಚಾಮರಾಜನಗರ -ಶ್ರೀನಿವಾಸಪ್ರಸಾದ್
ಮೈಸೂರು, ಕೊಡಗು -ಪ್ರತಾಪ ಸಿಂಹ
ಹಾಸನ -ಎ. ಮಂಜು
ಉಡುಪಿ, ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ
ದಕ್ಷಿಣ ಕನ್ನಡ -ನಳೀನ್ ಕುಮಾರ್ ಕಟೀಲ್
ಶಿವಮೊಗ್ಗ -ಬಿ.ವೈ ರಾಘವೇಂದ್ರ
ಉತ್ತರ ಕನ್ನಡ -ಅನಂತಕುಮಾರ್ ಹೆಗಡೆ
ಬೆಳಗಾವಿ – ಸುರೇಶ್ ಅಂಗಡಿ
ಚಿಕ್ಕೋಡಿ- ರಮೇಶ್ ಕತ್ತಿ
ವಿಜಾಪುರ- ರಮೇಶ್ ಜಿಗಜಿಣಗಿ
ಬಾಗಲಕೋಟೆ- ಪಿ.ಸಿ. ಗದ್ದೀಗೌಡರ್
ಹಾವೇರಿ- ಶಿವಕುಮಾರ್ ಉದಾಸಿ
ಹುಬ್ಬಳ್ಳಿ ಧಾರವಾಡ- ಪ್ರಹ್ಲಾದ್ ಜೋಷಿ
ದಾವಣಗೆರೆ- ಜಿ.ಎಂ. ಸಿದ್ದೇಶ್ವರ್
ಚಿತ್ರದುರ್ಗ- ಎ. ನಾರಾಯಣಸ್ವಾಮಿ
ಕೊಪ್ಪಳ- ಕರಡಿ ಸಂಗಣ್ಣ
ರಾಯಚೂರು- ಅಮರೇಶ್ ನಾಯಕ್
ಬಳ್ಳಾರಿ- ದೇವೇಂದ್ರಪ್ಪ
ಬೀದರ್- ಭಗವಂತ ಖೂಬಾ
ಕಲ್ಬುರ್ಗಿ- ಉಮೇಶ್ ಜಾಧವ್
ಕೋಲಾರ- ಡಿ.ಎಸ್. ವೀರಯ್ಯ
ಚಿಕ್ಕಬಳ್ಳಾಪುರ- ಬಚ್ಚೇಗೌಡ
ತುಮಕೂರು- ಜಿ.ಎಸ್. ಬಸವರಾಜು
ಬೆಂಗಳೂರು ಗ್ರಾಮಾಂತರ- ಸಿ.ಪಿ. ಯೋಗೇಶ್ವರ್
ಬೆಂಗಳೂರು ದಕ್ಷಿಣ- ತೇಜಸ್ವಿನಿ ಅನಂತಕುಮಾರ್
ಬೆಂಗಳೂರು ಕೇಂದ್ರ- ಪಿ.ಸಿ. ಮೋಹನ್
ಬೆಂಗಳೂರು ಉತ್ತರ- ಡಿ.ವಿ. ಸದಾನಂದಗೌಡ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ