ಬೆಂಗಳೂರು, ಮಾ.18-ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ನೇತೃತ್ವದಲ್ಲಿರುವ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಾಳೆ ನವದೆಹಲಿಯಲ್ಲಿ ನಡೆಯಲಿದ್ದು, ದೇಶದ ಮೊದಲ ಮತ್ತು 2ನೇ ಹಂತದ ಚುನಾವಣೆಗೆ ಕಾಂಗ್ರೆಸ್ನ ಹುರಿಯಾಳುಗಳನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಉಳಿದ ಹಂತಗಳಿಗೆ ಹಂತ ಹಂತವಾಗಿ ಅಭ್ಯರ್ಥಿಗಳನ್ನು ಪ್ರಕಟಿಸಲಾಗುತ್ತದೆ.
ಅದರಲ್ಲೂ ಪ್ರಮುಖವಾಗಿ ಕರ್ನಾಟಕದ ಅಭ್ಯರ್ಥಿಗಳ ಆಯ್ಕೆ ಕಾಂಗ್ರೆಸ್ಗೆ ದೊಡ್ಡ ತಲೆ ನೋವಾಗಿದ್ದು, ಕ್ಷೇತ್ರಗಳ ಹಂಚಿಕೆಯಲ್ಲಿ ತುಮಕೂರು ಕ್ಷೇತ್ರ ಕಗ್ಗಂಟಾಗಿ ಪರಿಣಮಿಸಿದೆ.
ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಇರುವ ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಇದಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ತುಮಕೂರು ಕ್ಷೇತ್ರವನ್ನು ಮರಳಿ ಪಡೆಯಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಮಾ.16 ರಂದು ನಿಗದಿಯಾಗಿದ್ದ ಕೇಂದ್ರ ಚುನಾವಣಾ ಸಮಿತಿ ಸಭೆ ರಾಹುಲ್ಗಾಂಧಿಯವರ ಅನುಪಸ್ಥಿತಿಯಿಂದಾಗಿ ಮುಂದೂಡಿಕೆಯಾಗಿತ್ತು. ಕರ್ನಾಟಕದ 28 ಕ್ಷೇತ್ರಗಳ ಪೈಕಿ ಜೆಡಿಎಸ್ಗೆ ಕಾಂಗ್ರೆಸ್ 8 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಉಳಿದ 20 ಕ್ಷೇತ್ರಗಳಲ್ಲಿ ಎಸ್.ಪಿ.ಮುದ್ದಹನುಮೇಗೌಡರನ್ನು ಹೊರತುಪಡಿಸಿ ಉಳಿದ 9 ಕ್ಷೇತ್ರಗಳಿಗೆ ಹಾಲಿ ಸಂಸದರನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ಈಗಾಗಲೇ ತೀರ್ಮಾನಿಸಿದೆ. ಉಳಿದ 11 ಕ್ಷೇತ್ರಗಳಿಗೆ ನಾಳೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳಲಿದೆ.
ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಸ್ಕ್ರೀನಿಂಗ್ ಕಮಿಟಿ ಚರ್ಚೆ ನಡೆಸಿ ಸಿದ್ಧಪಡಿಸಿದ್ದು, ನಾಳೆ ಅದು ಕೇಂದ್ರ ಚುನಾವಣಾ ಸಮಿತಿ ಮುಂದೆ ಚರ್ಚೆಯಾಗಿ ಅಂಗೀಕಾರ ಪಡೆದುಕೊಳ್ಳಬೇಕಿದೆ.
ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಹೈಕಮಾಂಡ್ ಏಕಕಾಲಕ್ಕೆ ಎರಡೂ ಹಂತದ ಅಭ್ಯರ್ಥಿಗಳಿಗೂ ಅಂಕಿತ ಹಾಕುವ ಸಾಧ್ಯತೆ ಇದೆ. ಆಂಧ್ರಪ್ರದೇಶ, ಪಂಜಾಬ್, ಹರಿಯಾಣ ಹಾಗೂ ಮಧ್ಯಪ್ರದೇಶ, ಉತ್ತರಪ್ರದೇಶ ರಾಜ್ಯಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಈಗಾಗಲೇ ಹೈಕಮಾಂಡ್ ನಿರಂತರವಾಗಿ ಪ್ರಕಟಣೆಗಳನ್ನು ಹೊರಡಿಸಿದೆ.
ಕೆಲವು ರಾಜ್ಯಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದ್ದು, ಅದರಲ್ಲಿ ಕರ್ನಾಟಕವೂ ಒಂದು. ನಾಳೆ ನಡೆಯಲಿರುವ ಮಹತ್ವದ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳುವ ಸಾಧ್ಯತೆ ಇದೆ.