ನೆನ್ನೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿಧನ-ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ ಮುಂದೂಡಿಕೆ

ಬೆಂಗಳೂರು,ಮಾ.18- ಕ್ಯಾನ್ಸರ್ ರೋಗದಿಂದ ನಿನ್ನೆ ಗೋವಾ ರಾಜಧಾನಿ ಪಣಜಿಯಲ್ಲಿ ನಿಧನರಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‍ರವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳ ಬೇಕಾಗಿರುವುದರಿಂದ ಇಂದು ನಡೆಯಬೇಕಿದ್ದ ಬಿಜೆಪಿಯ ಮಹತ್ವದ ಕೇಂದ್ರ ಚುನಾವಣಾ ಸಮಿತಿ ಸಭೆಯನ್ನು ಮುಂದೂಡಲಾಗಿದೆ.

ಪರಿಕ್ಕರ್ ಅವರ ಅಂತ್ಯಸಂಸ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಸುಷ್ಮಾ ಸ್ವರಾಜ್ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ.

ಕೇಂದ್ರ ಚುನಾವಣಾ ಸಮಿತಿಯ ಬಹುತೇಕ ಸದಸ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಸಂಜೆ ನವದೆಹಲಿಯಲ್ಲಿ ನಡೆಯಬೇಕಿದ್ದ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ.

ಹೀಗಾಗಿ ಇಂದು ಕರ್ನಾಟಕ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇಲ್ಲ. ನಾಳೆ 22 ಇಲ್ಲವೇ 28 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇಂದು ಕರ್ನಾಟಕ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆಗಾಗಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ಕರೆಯಲಾಗಿತ್ತು. ಸಭೆ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಚುನಾವಣಾ ಸಮಿತಿ ಶಿಫಾರಸು ಮಾಡಿರುವ ಹೆಸರುಗಳಿಗೆ ಕೋರ್ ಕಮಿಟಿ ಸಭೆಯಲ್ಲಿ ಸಮ್ಮತಿ ಪಡೆದು ಪಟ್ಟಿಯೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೆಹಲಿಗೂ ತೆರಳಿದ್ದಾರೆ. ಈ ನಡುವೆ ಪರಿಕ್ಕರ್ ನಿಧನ ಹೊಂದಿದ ಪರಿಣಾಮ ಇಂದಿನ ಸಭೆಯನ್ನು ಮುಂದೂಡಲಾಗಿದೆ.

ಪಕ್ಷದ ವರಿಷ್ಠ ನಾಯಕರು ಗೋವಾಗೆ ತೆರಳಿ ಅಂತಿಮ ದರ್ಶನ ಪಡೆಯಲಿದ್ದು, ಸಂತಾಪ ಸೂಚಕವಾಗಿ ಪಕ್ಷದ ಎಲ್ಲ ಚಟುವಟಿಕೆಗಳನ್ನು ರದ್ದುಪಡಿಸಲಾಗಿದೆ. ಹೀಗಾಗಿ ದೆಹಲಿಗೆ ತೆರಳಿರುವ ರಾಜ್ಯ ನಾಯಕರು ಮತ್ತೊಂದು ದಿನ ಅಲ್ಲಿಯೇ ತಂಗಬೇಕಿದೆ.

ಇಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳು ಕೂಡ ಮತ್ತೊಂದು ದಿನ ಕಾಯಬೇಕಿದ್ದು, ಪರಿಕ್ಕರ್ ಅಂತ್ಯ ಸಂಸ್ಕಾರದ ನಂತರ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಗೆ ಸಮಯ ನಿಗದಿಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

ದೆಹಲಿಯಲ್ಲಿ ಯಡಿಯೂರಪ್ಪ :
ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆದ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹಿಡಿದು ರಾಜ್ಯ ನಾಯಕರು ಹೈಕಮಾಂಡ್ ಭೇಟಿಗೆ ತೆರಳಿದ್ದಾರೆ.

ಭಾನುವಾರ ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಅರುಣ್ ಕುಮಾರ್, ಅರವಿಂದ್ ಲಿಂಬಾವಳಿ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

ಪಕ್ಷದ ಕೋರ್ ಕಮಿಟಿಯಲ್ಲಿ ಫೈನಲ್ ಮಾಡಿರೋ ಪಟ್ಟಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಂದೆ ಇಡಲಿರೋ ನಾಯಕರು, ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆಸಲಿದ್ದಾರೆ. ಅಮಿತ್ ಷಾ ಓಕೆ ಎಂದ ಮೇಲೆ ಕೇಂದ್ರ ಚುನಾವಣಾ ಕಮಿಟಿ ಮುಂದೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಸ್ತುತಪಡಿಸಲಿದ್ದಾರೆ.

ಮಂಡ್ಯ ವಿಚಾರದಲ್ಲಿ ದೆಹಲಿ ನಾಯಕರ ತೀರ್ಮಾನವೇ ಅಂತಿಮವಾಗಲಿದೆ. ಇಂದು ಸುಮಲತಾ ಅವರ ತೀರ್ಮಾನ ಸ್ಪಷ್ಟವಾಗುವ ಸಾಧ್ಯತೆ ಇರುವುದರಿಂದ ಸಂಜೆ ವೇಳೆಗೆ ಎಲ್ಲಾ ಕ್ಷೇತ್ರದ ಟಿಕೆಟ್ ಬಹುತೇಕ ಅಂತಿಮಗೊಳ್ಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ