ಲಕ್ನೋ :ಮಾ-16: ವಿವಾದಿತ ಧಾರ್ಮಿಕ ಸ್ಥಳದಲ್ಲಿ ಮುಸ್ಲಿಂ ಸಮುದಾಯದವರು ನಮಾಜ್ ನಡೆಸಬಾರದು ಎಂದು ಉತ್ತರ ಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ (ಯುಪಿಎಸ್ಸಿಡಬ್ಲ್ಯುಬಿ)ನ ಮುಖ್ಯಸ್ಥರಾಗಿರುವ ಡಾ. ವಸೀಂ ರಿಜ್ವಿ ಅವರು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಎಂಪಿಎಲ್ಬಿ) ಗೆ ಸಲಹೆ ನೀಡಿದ್ದಾರೆ.
ಭಾರತದಲ್ಲಿ ಒಟ್ಟು 9 ವಿವಾದಿತ ಧಾರ್ಮಿಕ ಸ್ಥಳಗಳಿವೆ; ಅವುಗಳಲ್ಲಿ 4 ಉತ್ತರ ಪ್ರದೇಶದಲ್ಲಿ , 2 ಗುಜರಾತ್ನಲ್ಲಿ, ತಲಾ ಒಂದು ಪಶ್ಚಿಮ ಬಂಗಾಲ, ಮಧ್ಯಪ್ರದೇಶ ಮತ್ತು ದಿಲ್ಲಿಯಲ್ಲಿವೆ. ಇವುಗಳು ವಿವಾದಿತ ಧಾರ್ಮಿಕ ಸ್ಥಳಗಳಾಗಿರುವುದರಿಂದ ಅಲ್ಲಿ ಮುಸ್ಲಿಮರು ನಮಾಜ್ ನಡೆಸುವುದನ್ನು ನಿಲ್ಲಿಸಬೇಕು ಎಂದು ರಿಜ್ವಿ ಅವರು ಎಐಎಂಪಿಎಲ್ಬಿ ಅಧ್ಯಕ್ಷ ಮೌಲಾನಾ ರಬಿ ಹಸನ್ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಈ ವಿವಾದಿತ ಧಾರ್ಮಿಕ ಸ್ಥಳಗಳಲ್ಲಿ ಹಿಂದೆ ಹಿಂದೂ ದೇವಾಲಯಗಳಿದ್ದು ಮುಸ್ಲಿಮ್ ಅರಸರು ಬಲವಂತದಿಂದ ಅವುಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಿರುವ ಬಗ್ಗೆ ಇತಿಹಾಸದಲ್ಲಿ ಸಾಕಷ್ಟು ಪುರಾವೆಗಳಿವೆ ಎಂದು ರಿಜ್ವಿ ಹೇಳಿದ್ದಾರೆ.
ಇತರ ಧರ್ಮಗಳ ಮಂದಿರಗಳನ್ನು ಕೆಡವಿ ಆ ಭೂಮಿಯನ್ನು ಬಲವಂತದಿಂದ ವಶಪಡಿಸಿಕೊಂಡು ಅಲ್ಲಿ ಮಸೀದಿ ನಿರ್ಮಿಸುವುದಕ್ಕೆ ಇಸ್ಲಾಮಿಕ್ ಕಾನೂನುಗಳು ಅವಕಾಶ ನೀಡುವುದಿಲ್ಲ; ಮಾತ್ರವಲ್ಲ ಅಂತಹ ಮಸೀದಿಗಳಲ್ಲಿ ಮುಸ್ಲಿಮರು ಸಲ್ಲಿಸುವ ಪ್ರಾರ್ಥನೆ ಕುರಾನ್ ಮತ್ತು ಶರೀಯಾದಲ್ಲಿ ಸ್ವೀಕೃತವಾಗುವುದಿಲ್ಲ ಎಂದು ವಿವರಿಸಿದ್ದಾರೆ.
ರಿಜ್ವಿ ಅವರು ಈ ಹಿಂದೆ ಅಯೋಧ್ಯೆಯಲ್ಲಿನ ವಿವಾದಿತ ಧಾರ್ಮಿಕ ಸ್ಥಳವನ್ನು ಹಿಂದುಗಳಿಗೆ ಬಿಟ್ಟುಕೊಡಬೇಕೆಂಬ ಸಲಹೆಯನ್ನು ನೀಡಿದ್ದರು.