ಸೀಟು ಹಂಚಿಕೆ ಮತ್ತು ಅಭ್ಯರ್ಥಿಗಳ ಆಯ್ಕೆ-ಮಹತ್ವದ ಸಭೆ ನಡೆಸಿದ ಕಾಂಗ್ರೇಸ್

ಬೆಂಗಳೂರು, ಮಾ.11- ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗಿನ ಸೀಟು ಹಂಚಿಕೆ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ದೆಹಲಿಯಲ್ಲಿಂದು ಮಹತ್ವದ ಚರ್ಚೆ ನಡೆಯಿತು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕರಾಗಿರುವ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್‍ನ ಉಸ್ತುವಾರಿಗೆ ನೇಮಕವಾಗಿರುವ ಎಐಸಿಸಿಯ ಆರು ಮಂದಿ ಕಾರ್ಯದರ್ಶಿಗಳು ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ್ದರು.

ನಾಳೆ ಗುಜರಾತ್‍ನಲ್ಲಿ ಕಾಂಗ್ರೆಸ್‍ನ ಸಿಡಬ್ಲ್ಯೂಸಿ ಸಭೆ ನಡೆಯುವುದರಿಂದ ಎಲ್ಲಾ ನಾಯಕರು ಅದರಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಯಿತು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್‍ನ ಹಾಲಿ ಸದಸ್ಯರಿರುವ 10ಕ್ಷೇತ್ರ ಮತ್ತು ಜೆಡಿಎಸ್‍ನ ಇಬ್ಬರು ಸಂಸದರಿರುವ ಎರಡು ಕ್ಷೇತ್ರಗಳು ಹಾಗೂ ಶಿವಮೊಗ್ಗ ಕ್ಷೇತ್ರ ಹೊರತುಪಡಿಸಿ ಉಳಿದ 15 ಕ್ಷೇತ್ರಗಳಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಕೊಪ್ಪಳ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮೈಸೂರು, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧಪಟ್ಟಂತೆ ಸುದೀರ್ಘ ಚರ್ಚೆ ನಡೆದು ಕನಿಷ್ಠ ಎರಡರಿಂದ ಗರಿಷ್ಠ ಐದು ಮಂದಿಯವರೆಗೆ ಪ್ರತಿ ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಶಿಫಾರಸು ಮಾಡಲಾಗಿತ್ತು.

ಈ ವರದಿಯನ್ನು ಆಧರಿಸಿ ಎಐಸಿಸಿಯ ಸ್ಕ್ರೀನಿಂಗ್ ಕಮಿಟಿ ಇಂದು ಪ್ರತಿ ಕ್ಷೇತ್ರವಾರು ಪರಿಶೀಲಿಸಿ ಕಾಂಗ್ರೆಸ್‍ನ ಹಾಲಿ ಸಂಸದರಿಗೆ ಟಿಕೆಟ್ ಖಾತ್ರಿಪಡಿಸಿದ್ದು, ಜೆಡಿಎಸ್‍ಗೆ ಬಿಟ್ಟು ಕೊಡಬಹುದಾದ ಆರೇಳು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 11 ಕ್ಷೇತ್ರಗಳಿಗೆ ತಲಾ ಎರಡು ಹೆಸರುಗಳನ್ನು ಎಐಸಿಸಿ ಚುನಾವಣಾ ಸಮಿತಿಗೆ ಶಿಫಾರಸು ಮಾಡಿದೆ.

ಗುಜರಾತ್‍ನ ಸಿಡಬ್ಲ್ಯೂಸಿ ಸಭೆಯ ನಂತರ ಕೇಂದ್ರ ಚುನಾವಣಾ ಸಮಿತಿ ಸಭೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ನೇತೃತ್ವದಲ್ಲಿ ನಡೆಯಲಿದ್ದು, ಅದರಲ್ಲಿ ಮಾಜಿ ಪ್ರಧಾನಿ ಮನಮೋಹನ್‍ಸಿಂಗ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜನಾರ್ಧನ್ ದ್ವಿವೇದಿ, ಅಹಮ್ಮದ್ ಪಟೇಲ್, ಅಂಬಿಕಾಸೋನಿ, ಕರ್ನಾಟಕದ ಆಸ್ಕರ್ ಫರ್ನಾಂಡಿಸ್, ಎಂ.ವೀರಪ್ಪಮೊಯ್ಲಿ ಸೇರಿದಂತೆ 14 ಮಂದಿ ನಾಯಕರು ಪಾಲ್ಗೊಳ್ಳಲಿದ್ದಾರೆ.

ಸ್ಕ್ರೀನಿಂಗ್ ಕಮಿಟಿ ಕಳುಹಿಸಿದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಗೆ ಕೇಂದ್ರ ಚುನಾವಣಾ ಸಮಿತಿ ಒಂದೆರಡು ದಿನಗಳಲ್ಲಿ ಅಂಗೀಕಾರ ನೀಡಲಿದ್ದು, ಒಂದೇ ಕಂತಿನಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಾಲಿನ ಸುಮಾರು 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಮೊದಲು ಸೋನಿಯಾಗಾಂಧಿ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾಗ ರಾಜ್ಯ ನಾಯಕರು ಟಿಕೆಟ್‍ಗಾಗಿ ದೆಹಲಿಗೆ ಎಡತಾಕಿ, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಒತ್ತಡ ಹೇರಲು ಆರಂಭಿಸುತ್ತಿದ್ದರು. ಆದರೆ, ರಾಹುಲ್‍ಗಾಂಧಿ ಅವರು ಇಂತಹ ಎಲ್ಲಾ ಲಾಬಿಗಳಿಗೂ ಕಡಿವಾಣ ಹಾಕಿ ಪಕ್ಷದಿಂದ ನಡೆಸಲಾದ ಸಮೀಕ್ಷೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಡಿರುವ ಶಿಫಾರಸು, ರಾಜ್ಯ ಚುನಾವಣಾ ಸಮಿತಿಯ ವರದಿ ಮತ್ತು ಕೇಂದ್ರ ಸ್ಕ್ರೀನಿಂಗ್ ಕಮಿಟಿಯ ಶಿಫಾರಸನ್ನು ಆಧಾರವಾಗಿಟ್ಟುಕೊಂಡು ಯಾವುದೇ ವೈಯಕ್ತಿಕ ಲಾಬಿಗೆ ಅವಕಾಶ ನೀಡದಂತೆ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಕ್ಷೇತ್ರದಲ್ಲಿ ಯಾರು ಹೆಚ್ಚು ಜನಪ್ರಿಯ ನಾಯಕರಾಗಿದ್ದಾರೋ ಮತ್ತು ಗೆಲ್ಲುವ ಅವಕಾಶ ಇದೆಯೋ ಅವರಿಗೆ ಕಾಂಗ್ರೆಸ್ ಟಿಕೆಟ್ ಒಲಿಯಲಿದೆ. ದಿಢೀರ್ ಕ್ಷೇತ್ರಕ್ಕೆ ಪ್ರವೇಶ ಪಡೆದುಕೊಂಡು ವೈಯಕ್ತಿಕ ವರ್ಚಸ್ಸಿನ ಮೇಲೆ ಮುಖಂಡರ ಲಾಬಿ ನಡೆಸಿ ಟಿಕೆಟ್ ಗಳಿಸುವ ನಾಯಕರಿಗೆ ಈ ಬಾರಿ ಕಡಿವಾಣ ಬಿದ್ದಿದೆ.

ಇಂದು ಮಧ್ಯಾಹ್ನ ನಡೆದ ಸಭೆಯಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಿದೆ. ಜತೆಗೆ ಜೆಡಿಎಸ್‍ಗೆ ಬಿಟ್ಟುಕೊಡುವ ಸೀಟುಗಳ ಬಗ್ಗೆಯೂ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ