ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಹಿನ್ನಲೆ-ಬಣಗುಡುತ್ತಿರುವ ವಿಧಾನಸೌಧ ಮತ್ತು ವಿಕಾಸಸೌಧ

ಬೆಂಗಳೂರು,ಮಾ.11-ಲೋಕಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯಾದ ಹಿನ್ನೆಲೆಯಲ್ಲಿ ರಾಜ್ಯ ಆಡಳಿತದ ಶಕ್ತಿಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ ಬಣಗುಡುತ್ತಿವೆ.

ನಿನ್ನೆ ಸಂಜೆಯಷ್ಟೇ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಗೆ ಬಂದಿದೆ. ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರು ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಬಹಳಷ್ಟು ಸಚಿವರು ಕೂಡ ಚುನಾವಣೆಯತ್ತ ತಮ್ಮ ಗಮನಹರಿಸಿದ್ದಾರೆ. ಹೀಗಾಗಿ ಅಧಿಕಾರಿಗಳು, ರಾಜಕಾರಣಿಗಳು, ಸಚಿವರು ಹಾಗೂ ಜನರಿಂದ ತುಂಬಿರುತ್ತಿದ್ದ ಶಕ್ತಿಸೌಧಗಳು ಖಾಲಿ ಖಾಲಿ ಎನಿಸುತ್ತಿವೆ.

ಚುನಾವಣಾ ದಿನಾಂಕ ಘೋಷಣೆಯಾದ ಮರುದಿನವೇ ಶಕ್ತಿಸೌಧಗಳಿಗೆ ಬರುವ ಸಾರ್ವಜನಿಕರ ಸಂಖ್ಯೆಯೂ ಇಳಿಮುಖವಾಗಿದೆ. ಕಾರಿಡಾರ್‍ನಲ್ಲಿ ತುಂಬಿರುತ್ತಿದ್ದ ಜನರ ಸಂಖ್ಯೆ ಇಂದು ತೀರಾ ಕಡಿಮೆ ಇತ್ತು. ಒಂದರ್ಥದಲ್ಲಿ ಬಿಕೋ ಎನ್ನುತ್ತಿದ್ದವು.

ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತಮ್ಮ ಕೆಲಸ ಕಾರ್ಯಗಳು ಆಗುವುದಿಲ್ಲ ಎಂಬ ಭಾವನೆ ಜನರಲ್ಲಿದೆ. ಚುನಾವಣೆ ಮುಗಿಯುವವರೆಗೂ ತಮ್ಮ ಕೆಲಸಕಾರ್ಯಗಳು ಆಗುವುದಿಲ್ಲ ಎಂದು ಭಾವಿಸಿರುವ ಜನರು ಸರ್ಕಾರದ ಕಚೇರಿಗಳಿಗೆ ಬರುವುದನ್ನೇ ಕಡಿಮೆ ಮಾಡಿದ್ದಾರೆ.

ಬಹಳಷ್ಟು ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ತೊಡಗಿದ್ದಾರೆ. ಒಟ್ಟಾರೆ ಸದಾ ಜನರು, ಅಧಿಕಾರಿಗಳಿಂದ ಗಿಜಿಗುಡುತ್ತಿದ್ದ ಶಕ್ತಿಸೌಧಗಳು ಇಂದು ಬಣಗುಡುತ್ತಿದ್ದವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ