ಮಳವಳ್ಳಿ,ಮಾ.9-ಸಾಲವಾಗಿ ಪಡೆದುಕೊಂಡಿದ್ದ ಹಣ ಹಿಂದಿರುಗಿಸದೆ ಕಿರಿಕಿರಿ ಉಂಟು ಮಾಡುತ್ತಿದ್ದ ವಕೀಲೆಯನ್ನು ಕೊಲೆ ಮಾಡಿ ಆಕೆ ಮೈಮೇಲ್ದಿ ಚಿನ್ನಾಭರಣವನ್ನು ತೆಗೆದುಕೊಂಡು ಶವವನ್ನು ಕಬ್ಬಿನ ಗದ್ದೆಗೆ ಬಿಸಾಡಿ ಪರಾರಿಯಾಗಿದ್ದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಂತಹಳ್ಳಿ ಗ್ರಾಮದ ಮಹದೇವಸ್ವಾಮಿ(45) ಬಂಧಿತ ಆರೋಪಿ.
ಮಳವಳ್ಳಿ ಜೆಎಂಸಿ ನ್ಯಾಯಾಲಯದಲ್ಲಿ ವಕೀಲರಾಗಿದ್ದ ಮಾದಲಾಂಬಿಕೆ(35) ಎಂಬುವರು ಪತಿಯಿಂದ ಬೇರೆಯಾಗಿ ಮಾದಹಳ್ಳಿಯ ತಳಗವಾದಿಯಲ್ಲಿ ತನ್ನ 11 ವರ್ಷದ ಮಗಳೊಂದಿಗೆ ವಾಸವಾಗಿದ್ದರು.
ಫೆ.25ರಂದು ಎಂದಿನಂತೆ ಕರ್ತವ್ಯಕ್ಕೆ ತೆರಳಿದ್ದ ಮಾದಲಾಂಬಿಕೆ ಅಂದು ಸಂಜೆ ಮನೆಗೆ ವಾಪಸ್ಸಾಗದೆ ನಾಪತ್ತೆಯಾಗಿದ್ದರಿಂದ ಈಕೆಯ ಅಕ್ಕ ರುದ್ರಮ್ಮ ಎಂಬುವರು 26ರಂದು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ನಡುವೆ ಮೂರು ದಿನದ ಹಿಂದೆ ತಾಲ್ಲೂಕಿನ ಮಾದಹಳ್ಳಿ-ತಳಗವಾದಿ ರಸ್ತೆಯಲ್ಲಿರುವ ಚಂದ್ರು ಎಂಬುವರ ಕಬ್ಬಿನ ಗದ್ದೆಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು.
ಶವದ ವಾರಸುದಾರರನ್ನು ಪತ್ತೆಹಚ್ಚುತ್ತಿದ್ದ ಸಂದರ್ಭದಲ್ಲಿ ವಕೀಲೆಯ ಅಕ್ಕ ರುದ್ರಮ್ಮ ಇದು ನನ್ನ ತಂಗಿಯದೇ. ಯಾರೋ ಕೊಲೆ ಮಾಡಿ ಕಬ್ಬಿನ ಗದ್ದೆಯಲ್ಲಿ ಶವ ಬಿಸಾಡಿದ್ದಾರೆಂದು ದೂರು ನೀಡಿದ್ದರು.
ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಸರ್ಕಲ್ ಇನ್ಸ್ಪೆಕ್ಟರ್ ಧರ್ಮೇಂದ್ರ ಅವರು ಮಾದಲಾಂಬಿಕೆಯವರ ಮೊಬೈಲ್ ನಂಬರ್ಗಳನ್ನು ಪರಿಶೀಲಿಸಿ, ಹಲವು ಬಾರಿ ವ್ಯಕ್ತಿಯೊಬ್ಬರಿಂದ ಇವರಿಗೆ ಹೆಚ್ಚು ಕರೆ ಬಂದಿರುವುದು ಗಮನಿಸಿ ಆ ನಂಬರಿನ ಆಧಾರದ ಮೇಲೆ ಆರೋಪಿ ಮಹದೇವಸ್ವಾಮಿಯನ್ನು ಬಂಧಿಸಿದ್ದಾರೆ.
ನಂತರ ಆರೋಪಿ ಮಹದೇವಸ್ವಾಮಿಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ವಕೀಲೆ ಮಾದಲಾಂಬಿಕೆ ತನ್ನ ಬಳಿ ಮೂರು ವರ್ಷದ ಹಿಂದೆ ಎರಡು ಲಕ್ಷ ಹಣ ಪಡೆದು ಅದನ್ನು ಹಿಂದಿರುಗಿಸದೆ ಸತಾಯಿಸುತ್ತಿದ್ದರು. ಅಲ್ಲದೆ ಇತ್ತೀಚೆಗೆ ಮತ್ತೆ 20 ಸಾವಿರ ಹಣ ಕೊಡುವಂತೆ ಪೀಡಿಸಿದಾಗ ಹಣ ಕೊಡುವುದಾಗಿ ಹೇಳಿ ಫೆ.25ರಂದು ಸಂಜೆ ಬೈಕ್ನಲ್ಲಿ ಕೂರಿಸಿಕೊಂಡು ಕಬ್ಬಿನ ಗದ್ದೆ ಬಳಿ ಕೊಲೆ ಮಾಡಿ ಆಕೆ ಮೈ ಮೇಲಿದ್ದ ಚಿನ್ನಾಭರಣವನ್ನು ತೆಗೆದುಕೊಂಡಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಆರೋಪಿಯನ್ನು ನಗರದ ಜೆಎಂಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು 15 ದಿನಗಳ ಕಾಲ ಆರೋಪಿ ಮಹದೇವಸ್ವಾಮಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪಿಎಸ್ಐ ಆನಂದ್, ಸಿಬ್ಬಂದಿಗಳಾದ ಪ್ರಭು, ರಾಜು, ಮಹೇಶ್, ರಿಯಾಜಿನ್, ಪ್ರಕಾಶ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.