ನೀರವ್ ಮೋದಿ ಒಡೆತನದ ಐಶಾರಾಮಿ ಬಂಗಲೆ ಸ್ಫೋಟಕ ಬಳಸಿ ಧ್ವಂಸ

ಮುಂಬೈ; ವಜ್ರದ ವ್ಯಾಪಾರಿ ನೀರವ್ ಮೋದಿ ಒಡೆತನದಲ್ಲಿ ನಿರ್ಮಿಸಲಾಗಿದ್ದ ಮಹಾರಾಷ್ಟ್ರದ ಅಲಿಬಾಗ್ ಕಡಲ ತೀರಬಳಿ ಇದ್ದ ಸುಮಾರು 100 ಕೋಟಿ ಮೌಲ್ಯದ ಐಶಾರಾಮಿ ಬಂಗಲೆಯನ್ನು ಸ್ಫೋಟಕ ಬಳಸಿ ಧ್ವಂಸ ಮಾಡಲಾಗಿದೆ.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಳೆದ 6 ದಿನಗಳಿಂದ ಬಂಗಲೆ ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತಿದ್ದು, ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಲಾಗಿದ್ದ ಮನೆಯ ಅಡಿಯಲ್ಲಿ ಸ್ಫೋಟಕಗಳನ್ನು ಇರಿಸಿ ಧ್ವಂಸಗೊಳಿಸಲಾಗಿದೆ. ಯಂತ್ರಗಳನ್ನು ಬಳಸಿ ಬಂಗಲೆಯನ್ನ ಧ್ವಂಸ ಮಾಡಲು ಪ್ರತ್ನಿಸಿದ್ದರೂ, ವಿಫಲವಾದ ಕಾರಣ ಸ್ಫೋಟಕಗಳ ಬಳಕೆಗೆ ಅನುಮತಿ ಪಡೆಯಲಾಗಿತ್ತು. ಸುಮಾರು 33,000 ಅಡಿಯಲ್ಲಿ ‘ರೂಪಾನ್ಯ’ ಎಂಬ ಹೆಸರಿನೊಂದಿಗೆ ಮನೆಯ ನಿರ್ಮಾಣ ಮಾಡಲಾಗಿತ್ತು. ಆದರೆ ಈ ವೇಳೆ ಕರವಾಳಿ ಪ್ರದೇಶದ ಪರಿಸರದ ನಿಯಮಗಳನ್ನು ಉಲ್ಲಂಘಿಸಿ ಕಾಮಗಾರಿ ನಡೆಸಲಾಗಿತ್ತು.

ಈ ಬಗ್ಗೆ ಶಂಬುರಾಜೆ ಯುವ ಕ್ರಾಂತಿ ಎಂಬ ಎನ್‍ಜಿಒ 2009ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಪರಿಸರ ವಲಯದ ನಿಯಮಗಳನ್ನು ಮೀರಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕೂಡಲೇ ಅಂತಹ 58 ಬಂಗಲೆಗಳನ್ನು ತೆರವುಗೊಳಿಸುವಂತೆ ಬಾಂಬೆ ಹೈ ಕೋರ್ಟ್ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಕೋರ್ಟ್ ಆದೇಶದಂತೆ ನಿಯಮ ಮೀರಿ ನಿರ್ಮಾಣ ಮಾಡಲಾಗಿದ್ದ ಆ ಪ್ರದೇಶದ ಒಟ್ಟು 58 ಮನೆ, ರೆಸಾರ್ಟ್ ಗಳನ್ನು ತೆರವುಗೊಳಿಸುವ ಕಾರ್ಯಮಾಡಲಾಗುತ್ತಿದೆ. ಇದರಲ್ಲಿ ನೀರವ್ ಮೋದಿಯ ಬಂಗಲೆಯೂ ಸೇರಿದೆ.

ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದ ಮನೆಯಲ್ಲಿ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಅಲ್ಲದೇ ಬಂಗಲೆಯ ಸನಿಹದಲ್ಲೇ ಬೃಹತ್ ಐಶಾರಾಮಿ ಈಜುಕೊಳ ಸೇರಿದಂತೆ, ಮನೆಯ ಸುತ್ತ ಉಕ್ಕಿನ ಕಾಂಪೌಂಡ್ ನಿರ್ಮಾಣ ಮಾಡಲಾಗಿತ್ತು.

Nirav Modi’s seaside bungalow demolished using explosives

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ