ಬೆಂಗಳೂರು, ಮಾ.16-ವಿವಿಧ ಶಾಲೆಗಳ ಮಕ್ಕಳಿಗೆ ಊಟ ಸರಬರಾಜು ಮಾಡುವ ಅದಮ್ಯ ಚೇತನ ಸಂಸ್ಥೆಗೆ ಎಸ್ಬಿಐ ಬ್ಯಾಂಕ್ನಿಂದ ವಾಹನಗಳನ್ನು ಹಸ್ತಾಂತರಿಸಲಾಯಿತು.
ನಗರದ ಜಕ್ಕೂರಿನ ಎಸ್ಬಿಐ ಕೇಂದ್ರದಲ್ಲಿ ಬ್ಯಾಂಕ್ನ ಅಧ್ಯಕ್ಷ ರಜನೀಶ್ಕುಮಾರ್ ಇಂದು ಅದಮ್ಯ ಚೇತನ ಸ್ವಯಂ ಸೇವಾ ಸಂಸ್ಥೆಗೆ ವಾಹನಗಳ ಕೀ ನೀಡಿ ನಂತರ ಮಾತನಾಡಿದ ಅವರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿದೊಡ್ಡ ವಾಣಿಜ್ಯ ವಲಯದ ಬ್ಯಾಂಕ್ ಆಗಿದ್ದು, ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ಸಂಸ್ಥೆಯೂ ಆಗಿದೆ ಎಂದರು.
ಬ್ಯಾಂಕ್ ಸಾಮಾಜಿಕ ಸೇವೆ ಮಾಡುವುದರ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಅದಮ್ಯ ಚೇತನ ಸಂಸ್ಥೆಯು ಶಾಲೆಯ ಮಕ್ಕಳಿಗಾಗಿ ಆಹಾರವನ್ನು ತಯಾರಿಸುತ್ತಿದೆ. ಅದನ್ನು ಸಮಯಕ್ಕೆ ಸರಿಯಾಗಿ ತಲುಪಿಸಲು ವ್ಯಾನ್ ನೀಡಿರುವುದಾಗಿ ತಿಳಿಸಿದರು.
ಈ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು ಅಗತ್ಯವಾಗಿದ್ದು, ಅಂತಹ ಆಹಾರವನ್ನು ನೀಡುತ್ತಿರುವ ಅದಮ್ಯ ಚೇತನ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.
ಮಕ್ಕಳ ಸಮಗ್ರ ಪ್ರಗತಿಗೆ ಅಗತ್ಯ ಕೊಡುಗೆ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಭಾವಿಸಿ ಈ ಕೊಡುಗೆ ನೀಡಿರುವುದಾಗಿ ತಿಳಿಸಿದರು.