ರಾಷ್ಟ್ರಧ್ವಜದ ಮಾದರಿಯಲ್ಲಿ ನಾಡಧ್ವಜವನ್ನು ಗೌರವಪೂರ್ವಕವಾಗಿ ಪ್ರದರ್ಶನ – ಸಮಿತಿಯ ಅಧ್ಯಕ್ಷ ಜಿ.ಬಸವರಾಜು

ಬೆಂಗಳೂರು, ಮಾ.16-ರಾಷ್ಟ್ರಧ್ವಜದ ಮಾದರಿಯಲ್ಲಿ ನಾಡಧ್ವಜವನ್ನು ಗೌರವಪೂರ್ವಕವಾಗಿ ಪ್ರದರ್ಶನ ಮಾಡಲು ಅನುವಾಗುವಂತೆ ನಿಯಮ ರೂಪಿಸಲು ರಾಜ್ಯ ಸರ್ಕಾರ ಸಲಹಾ ಸಮಿತಿಯೊಂದನ್ನು ರಚಿಸಬೇಕು ಎಂದು ಕರ್ನಾಟಕ ನಾಡಧ್ವಜ ಗೌರವ ಸಮಿತಿಯ ಅಧ್ಯಕ್ಷ ಜಿ.ಬಸವರಾಜು ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಹಾಗೂ ಇನ್ನಿತರ ರಾಷ್ಟ್ರೀಯ ಹಬ್ಬಗಳಲ್ಲಿ ರಾಷ್ಟ್ರಧ್ವಜ ಬಳಕೆಗೆ ರಾಷ್ಟ್ರಧ್ವಜ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಸಂಹಿತೆ ಪ್ರಕಾರ ಸೂರ್ಯ ಉದಯದ ನಂತರ ರಾಷ್ಟ್ರಧ್ವಜವನ್ನು ಮೇಲೇರಿಸಬೇಕು ಹಾಗೂ ಸೂರ್ಯಾಸ್ತದ ಮೊದಲು ರಾಷ್ಟ್ರಧ್ವಜವನ್ನು ಕೆಳಗಿಳಿಸಬೇಕು. ಸೂರ್ಯಾಸ್ತದ ನಂತರ ರಾಷ್ಟ್ರಧ್ವಜವನ್ನು ಪ್ರದರ್ಶಿಸುವುದು ಅಪರಾಧವಾಗುತ್ತದೆ. ಇದೇ ನಿಯಮವನ್ನು ನಾಡಧ್ವಜದ ಬಳಕೆಯಲ್ಲೂ ಅನುಸರಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ರಾಷ್ಟ್ರಧ್ವಜವನ್ನು ನೆಲದ ಮೇಲೆ ಅಥವಾ ನೀರಿನ ಮೇಲೆ ಹಾಕುವಂತಿಲ್ಲ. ರಾಷ್ಟ್ರಧ್ವಜದ ಮೇಲೆ ಯಾವುದೇ ಕೈ ಬರಹ, ಚಿತ್ ಮಾಡುವಂತಿಲ್ಲ.ಅಲ್ಲದೆ ಧ್ವಜವನ್ನು ತಲೆಕೆಳಗೆ ಮಾಡಿ ಪ್ರದರ್ಶಿಸುವಂತಿಲ್ಲ. ಆದರೆ ಕರ್ನಾಟಕದ ನಾಡಧ್ವಜವನ್ನು ಪ್ರದರ್ಶಿಸುವ ಬಗ್ಗೆ ಯಾವುದೇ ರೀತಿಯ ನೀತಿ ಸಂಹಿತೆ ಜಾರಿಗೊಳಿಸದೆ ಇರುವುದರಿಂದ ನಾಡಧ್ವಜಕ್ಕೆ ಅಗೌರವವಾಗುವ ರೀತಿಯಲ್ಲಿ ಹಲವೆಡೆ ಪ್ರದರ್ಶಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಹಲವೆಡೆ ಸಂಚರಿಸುವ ಸಂದರ್ಭದಲ್ಲಿ ನಾಡಧ್ವಜವನ್ನು ಮರಕ್ಕೆ ಸುತ್ತಿರುವುದು, ವಿದ್ಯುತ್ ಕಂಬಗಳಲ್ಲಿ ತಲೆಕೆಳಗೆ ಮಾಡಿ ಪ್ರದರ್ಶಿಸಿರುವುದು, ಕಾಂಪೌಂಡ್‍ಗಳು ಮತ್ತು ಗೇಟ್‍ಗಳ ಮೇಲೆ ಪ್ರದರ್ಶಿಸಿರುವುದು, ನಾಡಧ್ವಜವನ್ನು ಜಮೀನಿನ ಮೇಲೆ ಎಸೆದು ಹೋಗಿರುವುದು ಈ ರೀತಿ ಅನೇಕ ನಿದರ್ಶನಗಳು ಕಂಡುಬಂದಿದೆ ಎಂದು ಹೇಳಿದರು.
ಇದು ನಾಡಧ್ವಜಕ್ಕೆ ಅಪಮಾನ ಮಾಡಿದಂತೆ ಆಗುತ್ತದೆ. ಈ ಎಲ್ಲ ವಿಷಯಗಳನ್ನು ಕರ್ನಾಟಕ ನಾಡಧ್ವಜ ಗೌರವ ಸಮಿತಿಯು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ವಿವಿಧ ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳಿಗೆ ಭೇಟಿ ನೀಡಿ ನಾಡಧ್ವಜವನ್ನು ಗೌರವಪೂರ್ವಕವಾಗಿ ಪ್ರದರ್ಶಿಸುವ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ ಎಂದು ಹೇಳಿದರು.
ರಾಷ್ಟ್ರ ಧ್ವಜ ಬಳಕೆಯಂತೆ ನಾಡಧ್ವಜ ಬಳಕೆ ಮಾಡಬೇಕೆಂದು ನಾಡಧ್ವಜ ಸಂಹಿತೆ ರಚಿಸಲು ಸಲಹಾ ಸಮಿತಿ ರಚಿಸಬೇಕೆಂದು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ