ಬೆಂಗಳೂರು, ಮಾ.7- ಕುಖ್ಯಾತ ರೌಡಿ ಲಕ್ಷ್ಮಣ್ (40)ನನ್ನು ನಡುರಸ್ತೆಯಲ್ಲೇ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಇಂದು ಮಧ್ಯಾಹ್ನ ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾಮಾಕ್ಷಿಪಾಳ್ಯ, ಜ್ಞಾನಭಾರತಿ ಠಾಣೆಗಳ ರೌಡಿಶೀಟರ್ ಆಗಿದ್ದ ಲಕ್ಷ್ಮಣ್ ವಿರುದ್ಧ ಬೆಂಗಳೂರು ನಗರದ ಬಹುತೇಕ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿಚನ್ನಣ್ಣನವರ್ ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ಸುಮಾರು 1.10ರ ಸಮಯದಲ್ಲಿ ಸೋಪ್ ಪ್ಯಾಕ್ಟರಿ ಹಿಂಭಾಗದ ಆರ್.ಜಿ.ರಸ್ತೆಯಲ್ಲಿ ಇನೋವಾ ಕಾರಿನಲ್ಲಿ ಲಕ್ಷ್ಮಣ್ ಹೋಗುತ್ತಿದ್ದಾಗ ಸ್ಕಾರ್ಪಿಯೋ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಓವರ್ಟೇಕ್ ಮಾಡಿ ಲಕ್ಷ್ಮಣ್ ಕಾರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ತೀವ್ರ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಲಕ್ಷ್ಮಣ್ ಸಾವನ್ನಪ್ಪಿದ್ದಾನೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ಕುಮಾರ್ ತಿಳಿಸಿದ್ದಾರೆ.
ಈತನ ವಿರುದ್ಧ ಕೊಲೆ, ಕೊಲೆಯತ್ನ, ದಮ್ಕಿ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ರೌಡಿಶೀಟರ್ ಆಗಿದ್ದ ಲಕ್ಷ್ಮಣ್ ಇತ್ತೀಚೆಗೆ ಸಿಸಿಬಿ ಪೊಲೀಸರು ನಡೆಸಿದ್ದ ರೌಡಿ ಪರೇಡ್ಗೆ ಹಾಜರಾಗಿದ್ದನು.
ರೌಡಿ ಲಕ್ಷ್ಮಣ್ನನ್ನು ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ನಡು ರಸ್ತೆಯಲ್ಲೇ ಮಟಮಟ ಮಧ್ಯಾಹ್ನ ರೌಡಿಯ ಹತ್ಯೆ ನಡೆದಿರುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.
ಉತ್ತರ ವಿಭಾಗದ ಪೊಲೀಸರು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ರಾಮ ಮತ್ತು ಲಕ್ಷ್ಮಣ ಸಹೋದರರು. ಇವರಲ್ಲಿ ಲಕ್ಷ್ಮಣ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ. ಇತ್ತೀಚೆಗೆ ರಿಯಲ್ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ.