ಪೊಲೀಸರಿಂದ ಅಕ್ರಮವಾಗಿ ಜಮೀನಿನಲ್ಲಿ ಶೇಖರಣೆ ಮಾಡಿದ್ದ ಮರಳು ವಶ

ಕೊರಟಗೆರೆ, ಮಾ.7-ಅಕ್ರಮವಾಗಿ ಜಮೀನಿನಲ್ಲಿ ದಾಸ್ತಾನು ಮಾಡಲಾಗಿದ್ದ ಅಡ್ಡೆ ಮೇಲೆ ಪಿಎಸ್‍ಐ ಮಂಜುನಾಥ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿ 3 ಟ್ರಾಕ್ಟರ್, ಒಂದು ಜೆಸಿಬಿ ವಶಪಡಿಸಿಕೊಂಡಿದೆ.

ಖಾಸಗಿ ಜಮೀನಿನಲ್ಲಿ ಶೇಖರಣೆ ಆಗಿರುವ ಮರಳನ್ನು ಜೆಸಿಬಿ ಮೂಲಕ ಟ್ರಾಕ್ಟರ್‍ಗೆ ತುಂಬಿ ಅಕ್ರಮವಾಗಿ ಗ್ರಾಮದ ಹೊರವಲಯದ ನಿರ್ಜನ ಪ್ರದೇಶಕ್ಕೆ ಸಾಗಾಣಿಕೆ ಮಾಡಿದ ನಂತರ ಲಾರಿ ಮೂಲಕ ಬೆಂಗಳೂರಿಗೆ ಸಾಗಿಸುವ ವೇಳೆ ಮಧ್ಯರಾತ್ರಿ ಈ ದಾಳಿ ನಡೆದಿದೆ.

ತಾಲೂಕಿನ ಚನ್ನರಾಯನದುರ್ಗ ಹೋಬಳಿ ಜೆಟ್ಟಿ ಅಗ್ರಹಾರ ಗ್ರಾ.ಪಂ. ವ್ಯಾಪ್ತಿಯ ಅಜ್ಜಿಹಳ್ಳಿ ಗ್ರಾಮದ ರಂಗಪ್ಪಎಂಬುವರ ಖಾಸಗಿ ಜಮೀನಿನಿಂದ ಅಕ್ರಮವಾಗಿ ಮರಳನ್ನು ಜೆಸಿಬಿಯ ಮೂಲಕ ಟ್ರಾಕ್ಟರ್‍ಗಳಿಗೆ ತುಂಬುತ್ತಿದ್ದ ವೇಳೆ ಸ್ಥಳದಲ್ಲಿದ್ದ 3ಟ್ರಾಕ್ಟರ್ ಮತ್ತು 1ಜೆಸಿಬಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಜ್ಜಿಹಳ್ಳಿ ಗ್ರಾಮದ ರಂಗಪ್ಪಎಂಬುವರ ಖಾಸಗಿ ಜಮೀನಿನಿಂದ ಪ್ರತಿದಿನ ಅಕ್ರಮವಾಗಿ ಮರಳನ್ನು ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಶೇಖರಣೆ ಮಾಡಿ ನಂತರ ಅದನ್ನು ಲಾರಿಯ ಮೂಲಕ ಊರ್ಡಿಗೆರೆ-ದಾಬಸ್‍ಪೇಟೆ ಮಾರ್ಗವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೊರಟಗೆರೆ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಪೊಲೀಸ್ ಸಿಬ್ಬಂದಿಗಳಾದ ಮಲ್ಲಿಕಾರ್ಜುನ್, ಚಂದ್ರಶೇಖರ್, ಸಿದ್ದಲಿಂಗಪ್ರಸನ್ನ, ದೊಡ್ಡಲಿಂಗಯ್ಯ, ಕೃಷ್ಣಪ್ಪ ಹಾಜರಿದ್ದರು.

ಈ ಸಂಬಂಧ ಜಮೀನು ಮಾಲೀಕ ರಂಗಪ್ಪ ವಿರುದ್ಧ ಕೊರಟಗೆರೆ ಪೊಲೀಸ್‍ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ