ಕಾಂಗ್ರೇಸ್ ಸೇರ್ಪಡೆಯಾದ ಮಾಜಿ ಬಿಜೆಪಿ ಶಾಸಕ ತಿಪ್ಪೇಸ್ವಾಮಿ

ಬೆಂಗಳೂರು, ಮಾ.1- ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ತಿಪ್ಪೇಸ್ವಾಮಿ ಅವರು ಇಂದು ಕಾಂಗ್ರೆಸ್ ಸೇರ್ಪಡೆಯಾದರು.

2013ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ನಂತರ 2018ರಲ್ಲಿ ಬಂಡಾಯವೆದ್ದು ಮೊಳಕಾಲ್ಮೂರು ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಆರಂಭಿಸಿದ್ದ ಇವರು. ತಾಪಂ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ಇಂದು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ತಿಪ್ಪೇಸ್ವಾಮಿ ನೆರೆ ಜನಸಂಪರ್ಕ ಇರುವ ನಾಯಕರು. ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದ ನಾಯಕರಾದ ಮೇಲೆ ಆ ಕಡೆ ತಿರುಗಿ ನೋಡಿಲ್ಲ. ಅವರ ಸ್ವಂತ ಬೆಳವಣಿಗೆಯಾಗುತ್ತಿದೆಯೇ ಹೊರತು ಕ್ಷೇತ್ರದ ಅಭಿವೃದ್ಧಿ ಆಗುತ್ತಿಲ್ಲ. ಮುಂದಿನ ಬಾರಿ ಬೇರೆ ಕ್ಷೇತ್ರದಲ್ಲಿ ಅವರು ಸ್ಪರ್ಧಿಸುತ್ತಾರೆ. ಈ ಹಿಂದೆ ಬಳ್ಳಾರಿಯಲ್ಲಿ ಸೋಲಿನ ಭಯದಿಂದ ಮೊಳಕಾಲ್ಮೂರಿಗೆ ಬಂದಿದ್ದರು. ಇಲ್ಲಿ ಶಾಸಕರಾಗಿ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಆರೋಪಿಸಿದರು.

ಪಕ್ಷ ಸೇರ್ಪಡೆಯಾದ ತಿಪ್ಪೇಸ್ವಾಮಿ ಮಾತನಾಡಿ, ಶ್ರೀರಾಮುಲು ಅವರು ಮನೆ ದೇವರ ಮೇಲೆ ಆಣೆ ಮಾಡಿ ತಿಪ್ಪೇಸ್ವಾಮಿ ಅವರೇ ಮೊಳಕಾಲ್ಮೂರು ಕ್ಷೇತ್ರದ ಅಭ್ಯರ್ಥಿ ಎಂದು ಹೇಳಿದ್ದರು. ನಾಮಪತ್ರ ಸಲ್ಲಿಕೆಯ ಕೊನೆ ದಿನ ಬಂದು ನಾನೇ ಅಭ್ಯರ್ಥಿ ಎಂದರು. ಬಿಜೆಪಿಯವರನ್ನು ಹೇಗೆ ನಂಬುವುದು ಎಂದರಲ್ಲದೆ, ನರೇಂದ್ರ ಮೋದಿ ಅವರು ಕಪ್ಪು ಹಣ ವಾಪಸ್ ತಂದು 15 ಲಕ್ಷ ರೂ.ಗಳನ್ನು ಪ್ರತಿಯೊಬ್ಬರ ಖಾತೆಗೆ ಹಾಕುವುದಾಗಿ ಹೇಳಿದ್ದರು. ಅವರು ಹೇಳಿದ ಯಾವ ಭರವಸೆಗಳೂ ಈಡೇರಿಲ್ಲ. ನನ್ನ ಬಳಿಯಿಂದ ಐದು ವರ್ಷ ಪಕ್ಷ ಸಂಘಟನೆ ಮಾಡಿಸಿ ಕೊನೆಗೆ ಕೈಕೊಟ್ಟರು ಎಂದರು.

ಪುಲ್ವಾಮದಲ್ಲಿ ಉಗ್ರರು ಯೋಧರ ಮೇಲೆ ದಾಳಿ ಮಾಡಲು ಗುಪ್ತಚರ ಇಲಾಖೆಯ ವೈಫಲ್ಯ ಕಾರಣ ಎಂದು ತಿಪ್ಪೇಸ್ವಾಮಿ ಮಾತನಾಡಲು ಮುಂದಾದಾಗ ದಿನೇಶ್‍ಗುಂಡೂರಾವ್ ಅವರ ಕೈ ಹಿಡಿದು ಆ ವಿಷಯ ಮಾತನಾಡದಂತೆ ತಡೆಹಿಡಿದರು.

ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ಮೊಳಕಾಲ್ಮೂರು ಕ್ಷೇತ್ರಕ್ಕೆ ಭದ್ರಾ ಹಿನ್ನೀರಿನ ಯೋಜನೆ, ಐದು ಮೊರಾರ್ಜಿ ದೇಸಾಯಿ ಶಾಲೆಗಳು ಸೇರಿದಂತೆ ಹಲವಾರು ಯೋಜನೆಗಳನ್ನು ಮಂಜೂರು ಮಾಡಿಕೊಟ್ಟಿದ್ದರು ಎಂದು ತಿಪ್ಪೇಸ್ವಾಮಿ ನೆನಪಿಸಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ತಿಪ್ಪೇಸ್ವಾಮಿ ಹಿರಿಯ ನಾಯಕರು. ಅವರ ನಾಯಕತ್ವದಲ್ಲಿ ನಾವು ಚಿತ್ರದುರ್ಗದಲ್ಲಿ ಪಕ್ಷ ಬಲಪಡಿಸುತ್ತೇವೆ. ದಿನೇಶ್‍ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಪಕ್ಷಕ್ಕೆ ಅದೃಷ್ಟ ಬಂದಿದೆ. ಎಲ್ಲ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದೇವೆ. ಈ ಹಿಂದಿನ ಸರ್ಕಾರದಲ್ಲಿ ವಿಪರೀತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೆವು. ಆದರೆ, ಜನ ಅದಕ್ಕೆ ಮನ್ನಣೆ ನೀಡಲಿಲ್ಲ. ಭದ್ರಾ ಹಿನ್ನೀರನ್ನು ಮೊಳಕಾಲ್ಮೂರು, ಚಳ್ಳಕೆರೆ ಸೇರಿದಂತೆ ಮೂರು ತಾಲ್ಲೂಕುಗಳಿಗೆ ಬಳಸಿಕೊಳ್ಳಲು 1200 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಅದರ ಟೆಂಡರ್ ಮುಗಿದು ಕಾಮಗಾರಿ ಆರಂಭವಾಗಬೇಕಾಗಿದೆ ಎಂದರು.

ಸಂಸದ ಚಂದ್ರಪ್ಪ, ಶಾಸಕ ರಘುಮೂರ್ತಿ, ಮಾಜಿ ಶಾಸಕ ಡಿ.ಸುಧಾಕರ್, ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ.ಯೋಗೇಶ್‍ಬಾಬು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ