ನವದೆಹಲಿ: ನಿಯಮಬಾಹಿರವಾಗಿ ವಿಡಿಯೋಕಾನ್ ಸಂಸ್ಥೆಗೆ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್ನ ಮಾಜಿ ಅಧ್ಯಕ್ಷೆ ಚಂದಾ ಕೊಚ್ಚಾರ್ ಹಾಗೂ ವಿಡಿಯೋಕಾನ್ ವ್ಯವಸ್ಥಾಪಕ ನಿರ್ದೇಶಕ ಧೂತ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೇಂದ್ರೀಯ ತನಿಖಾ ದಳವು ಈಗಾಗಲೇ ಐಸಿಐಸಿಐ ಬ್ಯಾಂಕ್ನ ಮಾಜಿ ಸಿಇಒ ಚಂದಾ ಕೊಚ್ಚಾರ್, ಪತಿ ದೀಪಕ್ ಕೊಚ್ಚಾರ್ ಮತ್ತು ವಿಡಿಯೋಕಾನ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ಧೂತ್ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಮಾಡಿದೆ.
ಚಂದಾ ಕೊಚ್ಚಾರ್ ಅವರು ಬ್ಯಾಂಕ್ನ ಸಿಇಒ ಆಗಿದ್ದ ವೇಳೆ ವಿಡಿಯೋಕಾನ್ ಸಂಸ್ಥೆಯು ಐಸಿಐಸಿಐ ಬ್ಯಾಂಕ್ನಿಂದ 3,250 ಕೋಟಿ ರೂ. ಸಾಲವನ್ನು 2012ರಲ್ಲಿ ಅಕ್ರಮವಾಗಿ ಪಡೆದಿತ್ತು. ವೇಣುಗೋಪಾಲ್ ಧೂತ್ ಮತ್ತು ಕೊಚ್ಚಾರ್ ಪತಿ ಇದರಲ್ಲಿ ಪಾಲುದಾರರಾಗಿದ್ದರು. ಈ ಸಾಲದ ಮೊತ್ತವನ್ನು ಚಂದಾ ಅವರು ಐಸಿಐಸಿಐ ವಾರ್ಷಿಕ ಲೆಕ್ಕಾಚಾರದಿಂದ ಗೌಪ್ಯವಾಗಿರಿಸಿಟ್ಟಿದ್ದರು. ಇದಲ್ಲದೇ ಆ ಸಾಲ ನೀಡುವ ಸಂದರ್ಭದಲ್ಲಿಯೇ ವಿಡಿಯೋಕಾನ್ ಸಂಸ್ಥೆ 40 ಸಾವಿರ ಕೋಟಿ ರೂ.ಗೂ ಅಧಿಕ ಸಾಲವನ್ನು ಹೊಂದಿತ್ತು. ಆದರೆ, ಈ ಸಾಲದ ಮೊತ್ತವನ್ನು ವಿಡಿಯೋಕಾನ್ ಹೂಡಿಕೆದಾರ ಧೂತ್ ಮೂಲಕ ಕೊಚ್ಚಾರ್ ಅವರ ಇನ್ನೊಂದು ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ.
ಕಳೆದ ತಿಂಗಳು ಎಫ್ಐಆರ್ ಸಲ್ಲಿಸಿದ ಬಳಿಕ ಸಿಬಿಐ ಮೂವರು ಆರೋಪಿಗಳ ಮನೆ ಮತ್ತು ಕಚೇರಿಗಳಲ್ಲಿ ಹುಡುಕಾಟ ನಡೆಸುತ್ತಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದೆ.
Chanda Kochhar, Videocon’s Venugopal Dhoot’s Homes Searched In Loan Case