ಶ್ರೀರಂಗಪಟ್ಟಣ, ಫೆ.28 – ಹಳೆ ದ್ವೇಷದ ಹಿನ್ನೆಲೆಯಲ್ಲಿ ಮದ್ಯಪಾನ ಮಾಡಿಸಿ ಮದ್ಯದ ಅಮಲಿನಲ್ಲಿದ್ದಾಗ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಶ್ರೀರಂಗಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ಆಲದಹಳ್ಳಿಯ ಎಲ್.ಆರ್.ಹನುಮಂತ ಅಲಿಯಾಸ್ ಮುಲ್ಲ , ಮಂಚೇಗೌಡ ಹಾಗೂ ಟಿ.ನರಸೀಪುರ ತಾಲ್ಲೂಕು ಯಾಚೇನಹಳ್ಳಿಯ ಪ್ರದೀಪ ಬಂಧಿತರು.
ಫೆ.21ರಂದು ಈ ಮೂವರು ಸೇರಿ ಆಲದಹಳ್ಳಿಯ ಕ್ಯಾಂಟಿನ್ ನಂಜುಂಡೇಗೌಡ ಎಂಬುವವರ ಮಗ ದಿಲೀಪ (28) ನಿಗೆ ಪಟ್ಟಣದ ಹೊರವಲಯದಲ್ಲಿರುವ ದೆಹಲಿ ಗೇಟ್ ಬಳಿ ಮದ್ಯಪಾನ ಮಾಡಲು ಕರೆಸಿಕೊಂಡಿದ್ದರು. ನಂತರ ಕುಡಿದ ಅಮಲಿನಲ್ಲಿದ್ದಾಗ ದಿಲೀಪನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಶವವನ್ನು ಕಾವೇರಿ ನದಿಯಲ್ಲಿ ಬಿಸಾಡಿ ಪರಾರಿಯಾಗಿದ್ದರು.
ದಿಲೀಪ ಹಾಗೂ ಪ್ರದೀಪ ಆತ್ಮೀಯ ಸ್ನೇಹಿತರಾಗಿದ್ದರು. ಈ ನಡುವೆ ಹನುಮಂತ ಮತ್ತು ದಿಲೀಪನ ನಡುವೆ ಕೌಟುಂಬಿಕ ವಿಚಾರಕ್ಕೆ ಪರಸ್ಪರ ಜಗಳವಾಗಿತ್ತು. ಈ ವೈಷಮ್ಯವನ್ನಿಟ್ಟುಕೊಂಡ ಹನುಮಂತ ಪ್ರದೀಪನ ಮೂಲಕ ದಿಲೀಪನನ್ನು ಕರೆಸಿಕೊಂಡು ಮೂವರು ಸೇರಿ ಈ ಕೃತ್ಯ ಮಾಡಿರುವುದಾಗಿ ವಿಚಾರಣೆ ವೇಳೆ ಬಂಧಿತರು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ಶಿವಪ್ರಕಾಶ್ ದೇವರಾಜ್ ಮಾರ್ಗದರ್ಶನದಲ್ಲಿ ಸಿಪಿಐ ಕೃಷ್ಣಪ್ಪ , ಪಿಎಸ್ಐ ಮುದ್ದಮಹದೇವ ನೇತೃತ್ವದ ಪೊಲೀಸರ ತಂಡ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಮೂರು ಬೈಕ್, ಸೈಜುಗಲ್ಲು, ಮೂರು ಮೊಬೈಲ್ ವಶಪಡಿಸಿಕೊಂಡಿದ್ದಾರೆ.