ನವದೆಹಲಿ, ಫೆ.27- ಭಾರತದ ಸೇನಾಪಡೆಗಳಿಗೆ ತೀರ ಅಗತ್ಯವಾಗಿರುವ 2700 ಕೋಟಿ ರೂ. ವೆಚ್ಚದ ಯುದ್ಧ ಸಲಕರಣೆಗಳು ಮತ್ತು ರಕ್ಷಣಾ ಸಾಧನಗಳನ್ನು ಖರೀದಿಸಲು ಕೇಂದ್ರ ರಕ್ಷಣಾ ಸಚಿವಾಲಯದ ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಸಮ್ಮತಿಸಿದೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಖರೀದಿಗೆ ಸಮ್ಮತಿ ನೀಡಲಾಗಿದೆ.
ಭಾರತ-ಪಾಕ್ ನಡುವೆ ಸಮರ ಸದೃಶ ವಾತಾವರಣ ಸೃಷ್ಟಿಯಾಗಿರುವ ಸಂದರ್ಭದಲ್ಲೇ 2700 ಕೋಟಿ ರೂ. ವೆಚ್ಚದ ಯುದ್ಧೋಪಕರಣಗಳನ್ನು ಖರೀದಿಸಲು ಕೇಂದ್ರ ಒಪ್ಪಿಗೆ ನೀಡಿರುವುದು ಮಹತ್ವದ ಬೆಳವಣಿಗೆ.
ಭೂಸೇನೆ, ವಾಯುಪಡೆ ಮತ್ತು ನೌಕಾದಳಗಳಿಗೆ ಅತ್ಯಾಧುನಿಕ ಸಲಕರಣೆ ಮತ್ತು ಸಾಧನಗಳನ್ನು ಈ ಯೋಜನೆಯಲ್ಲಿ ಖರೀದಿಸಲಾಗುತ್ತದೆ. ಅಲ್ಲದೆ, ಭಾರತೀಯ ನೌಕಾಪಡೆಗೆ ಎರಡು ನೌಕೆಗಳನ್ನು ಸಹ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ.