ಉಗ್ರರ ಬೃಹತ್ ತರಬೇತಿ ಕೇಂದ್ರವನ್ನು ಧ್ವಂಸಗೊಳಿಸಿದ ಭಾರತೀಯ ವಾಯುಪಡೆ

ನವದೆಹಲಿ, ಫೆ.27- ಭಾರತೀಯ ವಾಯುಪಡೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಅಲ್ಲಿ ಧ್ವಂಸಗೊಳಿಸಿದ ಬಾಲಾಕೋಟ್‍ನಲ್ಲಿರುವ ಜೈಶ್ ಇ ಉಗ್ರರ ಬೃಹತ್ ತರಬೇತಿ ಕೇಂದ್ರವು ವಿಶ್ವದ ಅತ್ಯಂತ ಪ್ರಬಲ ಮತ್ತು ಸಮರ್ಥ ಅಮೆರಿಕ ಸೇನಾ ಪಡೆ ಅಭೇದ್ಯ ಮತ್ತು ದುರ್ಗಮವಾಗಿತ್ತು. ಇದರ ಮೇಲೆ ನಿರ್ದಿಷ್ಟ ದಾಳಿ ನಡೆಸಲು ಈ ಹಿಂದೆ ಅಮೆರಿಕ ಸೇನಾ ಪಡೆಗಳು ಯತ್ನಿಸಿ ವಿಫಲವಾಗಿದ್ದವು.

ಐಎಎಫ್‍ನ ನಿಖರ ವಾಯು ದಾಳಿ ಬೆನ್ನಲ್ಲೇ ಈ ತರಬೇತಿ ಕೇಂದ್ರದ ಕೆಲವು ರೋಚಕ ಮಾಹಿತಿಗಳು ಲಭ್ಯವಾಗಿದೆ.

ದಶಕಗಳಿಂದಲೂ ಸಾವಿರಾರು ಉಗ್ರರಿಗೆ ಕಾರಸ್ಥಾನವಾಗಿದ್ದ ಬಾಲಾಕೋಟ್ ಉಗ್ರ ಕ್ಯಾಂಪ್ ಇದೀಗ ನಾಮಾವಶೇಷವಾಗಿದ್ದು, ಇದೇ ಉಗ್ರ ಕ್ಯಾಂಪ್ ನಲ್ಲಿ ಇಡೀ ವಿಶ್ವಕ್ಕೇ ಕಂಟಕವಾಗಿದ್ದ ನೂರಾರು ಉಗ್ರಗಾಮಿಗಳು ತರಬೇತಿ ಪಡೆದಿದ್ದರು.

ಇಂತಹ ಕುಖ್ಯಾತ ಉಗ್ರ ಕ್ಯಾಂಪ್ ನ ಮಾಹಿತಿ ಇದೀಗ ಲಭ್ಯವಾಗಿದ್ದು, ಸ್ವತಃ ವಿಶ್ವಸಂಸ್ಥೆಯೇ ಕಲೆಹಾಕಿರುವ ದಾಖಲೆಯ(ಡಾಸಿಯರ್) ಪುಟಗಳು ಭಾರತದ ವಾಯುಪಡೆ ಏರ್ ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಜೈಶ್-ಇ-ಮೊಹಮದ್, ಹಿಜ್ಬುಲ್ ಮುಜಾಹಿದೀನ್ ಮತ್ತು ಲಷ್ಕರ್-ಎ-ತೊಯ್ಬಾ ಸೇರಿದಂತೆ ಪಾಕಿಸ್ತಾನದ ಅತ್ಯಂತ ಕ್ರೂರ ಉಗ್ರಗಾಮಿ ಸಂಘಟನೆಗಳ ನೆಲೆಗಳನ್ನು ಸಾರಾ ಸಗಟಾಗಿ ಧ್ವಂಸಗೊಳಿಸಿದೆ.

ಬಾಲಾಕೋಟ್ ಉಗ್ರ ಕ್ಯಾಂಪ್ ಅಕ್ಷರಶಃ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿತ್ತು. ಒಂದು ದೇಶದ ಸೇನೆ ತನ್ನ ಯೋಧರಿಗೆ ತರಬೇತಿ ನೀಡಲು ಬೇಕಿದ್ದ ಎಲ್ಲ ವ್ಯವಸ್ಥೆಗಳೂ ಬಾಲಾಕೋಟ್ ಉಗ್ರ ಕ್ಯಾಂಪ್‍ನಲ್ಲಿತ್ತು. ಇಲ್ಲಿ ಆತ್ಮಾಹುತಿ ದಾಳಿಕೋರರು ತಮಗಾಗಿ ನಿರ್ಮಿಸಿಕೊಂಡಿದ್ದ ಸ್ವಿಮ್ಮಿಂಗ್ ಪೂಲನಿಂದ ಹಿಡಿದು ಏನೆಲ್ಲ ವ್ಯವಸ್ಥೆಗಳನ್ನು ಹೊಂದಿದ್ದರು ಎಂಬುದು ವಿಶ್ವಸಂಸ್ಥೆಯ ದಾಖಲೆ ಪತ್ರದಲ್ಲಿ ಬಹಿರಂಗಗೊಳಿಸಿದೆ.

ಮತ್ತೊಂದು ಆಘಾತಕಾರಿ ಸಂಗತಿಯೆಂದರೆ ಈ ಉಗ್ರಗಾಮಿಗಳಿಗೆ ತರಬೇತಿ ನೀಡುತ್ತಿದ್ದವರು ಪಾಕಿಸ್ತಾನ ಸೇನಾ ಪಡೆಯ ನಿವೃತ್ತ ಸೇನಾಧಿಕಾರಿಗಳು. ಉಗ್ರರಿಗೆ ತರಬೇತಿ ನೀಡಿ ಅವರಿಗೆ ಬೆಂಬಲ ನೀಡಿದ ಘೋರ ಅಪರಾಧಕ್ಕಾಗಿ ಅವರೂ ಸಹ ವಾಯುಪಡೆಯ ದಾಳಿಗೆ ತುತ್ತಾಗಿದ್ದಾರೆ.

ಈ ಡಾಸಿಯರ್‍ನಲ್ಲಿನ ಮಾಹಿತಿಗಳ ಅನ್ವಯ ಇಲ್ಲಿ ಏಕಕಾಲಕ್ಕೆ 250ಕ್ಕೂ ಉಗ್ರರು ತರಬೇತಿ ಪಡೆಯುತ್ತಿದ್ದರು. ಇಲ್ಲಿ ಒಂದು ಯುದ್ಧಕ್ಕೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗುವಂತಹ ಶಸ್ತ್ರಾಸ್ತ್ರಗಳ ಬೃಹತ್ ಭಂಡಾರವೇ ಇತ್ತು.

2000ನೇ ಇಸವಿಯಲ್ಲಿ ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‍ನಿಂದ ಸ್ಥಾಪಿತವಾದ ಮತ್ತು ಅವನ ಸೋದರ ಮಫ್ತಿ ಅಬ್ದುಲ್ ರೌಫ್ ಅಗ್ರ್ಸನ ನಾಯಕತ್ವದಲ್ಲಿ 250 ಉಗ್ರರಿಗೆ ಇಲ್ಲಿ ತರಬೇತಿ ನೀಡಲಾಗುತ್ತಿತ್ತು. ಅಬ್ದುಲ್ ರೌಫ್ ಅಗ್ಸರ್ ಕಾಶ್ಮೀರಿ, ಕಾಶ್ಮೀರದಲ್ಲಿನ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದ್ದ. ಇನ್ನು ಮಸೂದ್ ಅಜರ್‍ನ ಮತ್ತೊಬ್ಬ ಸೋದರ ಇಬ್ರಾಹಿಂ ಅಜರ್ ಸಹ ಈ ರಕ್ತಪಿಪಾಸು ಸಂಘಟನೆಯ ಪ್ರಮುಖ ಸದಸ್ಯ. ಇವನು ಭಾರತದ ವಿಮಾನವನ್ನು (ಐಸಿ-814) ಅಪಹರಣ ಮಾಡಿದ್ದ.

ಈ ಕ್ರೂರ ಮತ್ತು ನಿರ್ದಯ ಉಗ್ರಗಾಮಿಗಳು ಮತ್ತು ಅವರಿಗೆ ತರಬೇತಿ ನೀಡಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ಎಲ್ಲರೂ ಈಗ ಐಎಎಫ್‍ನ ಭರ್ಜರಿ ವಾಯು ಕಾರ್ಯಾಚರಣೆಯಲ್ಲಿ ನಿರ್ನಾಮವಾಗಿರುವುದು ಸಂತಸದ ಸುದ್ದಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ