ಮೈಸೂರು, ಫೆ.22-ವಾಹನ ಕಳ್ಳತನವಾಗಿದೆ ಎಂದು ಸುಳ್ಳು ದೂರು ನೀಡಿ ಫೈನಾನ್ಸ್ ಕಂಪೆನಿಗೆ ವಂಚಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಡಿಮೊಹಲ್ಲಾದ ನಿವಾಸಿ ಕೈಸರ್ ಬಂಧಿತ ಆರೋಪಿಯಾಗಿದ್ದು, ಈತನಿಂದ 53ಸಾವಿರ ಬೆಲೆಯ ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಫೆ.18ರಂದು ತನ್ನ ವಾಹನ ಕಳ್ಳತನವಾಗಿದೆ ಎಂದು ಲಷ್ಕರ್ ಠಾಣೆಗೆ ಕೈಸರ್ ದೂರು ನೀಡಿದ್ದನು.
ತನಿಖೆ ಕೈಗೊಂಡಿದ್ದ ಪೊಲೀಸರು ಈ ದ್ವಿಚಕ್ರ ವಾಹನ ಕೊಳ್ಳಲು ಫೈನಾನ್ಸ್ ನೀಡಿರುವ ಶ್ರೀರಾಮ ಫೈನಾನ್ಸ್ಗೆ ಭೇಟಿ ನೀಡಿ ವಿಚಾರಣೆ ಮಾಡಿದಾಗ ಕೈಸರ್ ಇದುವರೆಗೂ ವಾಹನದ ಯಾವುದೇ ಕಂತುಗಳನ್ನು ಕಟ್ಟಿಲ್ಲದಿರುವುದು ಕಂಡು ಬಂದಿದೆ.
ತದನಂತರ ಕೈಸರ್ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಈಗ ನಂಬರ್ ಪ್ಲೇಟ್ ಇಲ್ಲದ ಸುಜುಕಿ ಆಕ್ಸಿಸ್ ವಾಹನವನ್ನು ಓಡಿಸುತ್ತಿದ್ದದ್ದು ತಿಳಿದುಬಂದಿದೆ.ಈ ಮಾಹಿತಿ ಆಧಾರದ ಮೇಲೆ ಫೆ.20ರಂದು ಗುಡ್ಶೆಫರ್ಡ್ ಶಾಲೆ ಬಳಿ ಕಾರ್ಯಾಚರಣೆ ನಡೆಸಿ ನಂಬರ್ ಪ್ಲೇಟ್ ಇಲ್ಲದ ಸುಜುಕಿ ಬೈಕ್ನಲ್ಲಿ ಬರುತ್ತಿದ್ದ ಈತನನ್ನು ವಾಹನ ಸಮೇತ ಬಂಧಿಸಿ ವಿಚಾರಣೆಗೊಳಪಡಿಸಿದ್ದರು.
ಈ ವೇಳೆ ಈತ ಶ್ರೀರಾಮ ಫೈನಾನ್ಸ್ನಿಂದ ವಾಹನ ಖರೀದಿ ಮಾಡಿ ಡೌನ್ಪೇಮೆಂಟ್ ಮಾತ್ರ ಕೊಟ್ಟು ನಂತರ ಯಾವುದೇ ಕಂತು ಕಟ್ಟಿರುವುದಿಲ್ಲ. ಈ ವಾಹನದ ಒಂದು ಕೀಯನ್ನು ತನ್ನ ಬಳಿಯೇ ಇಟ್ಟುಕೊಂಡು ಇಮ್ರಾನ್ ಎಂಬ ವ್ಯಕ್ತಿಗೆ ವಾಹನ ಅಡವಿಟ್ಟು ಇನ್ನೊಂದು ಕೀ ಬಳಸಿ ಈ ವಾಹನವನ್ನು ಕಳ್ಳತನ ಮಾಡಿ ನಂಬರ್ ಪ್ಲೇಟ್ ತೆಗೆದು ಹಾಕಿ ಓಡಿಸುತ್ತಿದ್ದನು.
ಫೈನಾನ್ಸ್ ಕಂಪೆನಿ, ಇನ್ಸುರೆನ್ಸ್ ಕಂಪೆನಿ ಹಾಗೂ ಅಡಮಾನ ಇಟ್ಟುಕೊಂಡಿದ್ದ ವ್ಯಕ್ತಿಗೆ ಮೋಸ ಮಾಡುವ ಉದ್ದೇಶದಿಂದ ಈ ರೀತಿ ಸಂಚು ಮಾಡಿ ದೂರು ನೀಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಈ ಪತ್ತೆ ಕಾರ್ಯವನ್ನು ಅಪರಾಧ ವಿಭಾಗದ ಡಿಸಿಪಿ ಡಾ.ವಿಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಲಷ್ಕರ್ ಠಾಣೆಯ ಇನ್ಸ್ಪೆಕ್ಟರ್ ಮುನಿಯಪ್ಪ ಹಾಗೂ ಸಿಬ್ಬಂದಿಗಳು ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.