ಬೆಂಗಳೂರು, ಫೆ.21- ಕಳೆದ ಎರಡು ದಿನಗಳಿಂದಲೂ ಲೋಹದ ಹಕ್ಕಿಗಳ ಕಲರವ ಕಣ್ತುಂಬಿಕೊಂಡಿದ್ದ ಜನರಿಗೆ ಇಂದು ಪ್ಲ್ಯಾಸ್ಟಿಕ್-ಫೈಬರ್ ಹಕ್ಕಿಗಳ ಚೆಲ್ಲಾಟ ಕಚಗುಳಿ ಇಟ್ಟಿತು.
ಏರ್ಶೋದಲ್ಲಿ ನಡೆದ ಡ್ರೋಣ್ಗಳ ಸ್ಪರ್ಧೆ ಅತ್ಯಾಕರ್ಷಣೆಯಾಗಿ ನೋಡುಗರ ಗಮನ ಸೆಳೆದಿದ್ದಲ್ಲದೆ, ಚಮತ್ಕಾರಿ ಸ್ಟಂಟ್ಗಳನ್ನು ಮಾಡಿ ಪ್ರೇಕ್ಷಕರ ಉಬ್ಬೇರುವಂತೆ ಮಾಡಿದವು.
ಯಲಹಂಕ ವಾಯು ನೆಲೆಯಲ್ಲಿ ಇಂದು ನಡೆದ ಡ್ರೋಣ್ ಸ್ಪರ್ಧೆಯಲ್ಲಿ ಸುಮಾರು 180 ತರಾವರಿ ಡ್ರೋಣ್ಗಳು ಭಾಗವಹಿಸಿದ್ದವು. ನಾಲ್ಕು ರೆಕ್ಕೆಗಳ ಡ್ರೋಣ್ಗಳು ಯುದ್ಧ ವಿಮಾನದ ಆಕಾರದಲ್ಲಿರುವ ಡ್ರೋಣ್ಗಳು ಸಾವಿರಾರು ಮೀಟರ್ಗಟ್ಟಲೆ ಮೇಲಕ್ಕೆ ಹಾರಿ ತಮ್ಮ ಚಾಕಚಕ್ಯತೆಗಳನ್ನು ಪ್ರದರ್ಶಿಸಿದವು.
ಅದರಲ್ಲಿ ಪ್ರಮುಖವಾಗಿ ದಕ್ಷ, ಎಕ್ಸ್ಕ್ಯಾಲಿಬರ್, ವಜ್ರಯುಎವಿ ಹೆಚ್ಚು ಆಕಷರ್ಣೀಯ ಪ್ರದರ್ಶನ ನೀಡಿದವು.ಡ್ರೋಣ್ಗಳ ಸ್ಪರ್ಧೆಯನ್ನು ಮೂರು ವಿಭಾಗದಲ್ಲಿ ಆಯೋಜಿಸಲಾಗಿತ್ತು. ದೂರದ ಸ್ಥಳದವರೆಗೂ ಹಾರಾಟ ನಡೆಸಿ ಮಾಹಿತಿ ಸಂಗ್ರಹಿಸುವ ಸರ್ವಲೆನ್ಸ್ ವಿಭಾಗ, ಆಹಾರ ಪಟ್ಟಣ ಮತ್ತು ಇತರ ವಸ್ತುಗಳನ್ನು ನಿರ್ದಿಷ್ಟ ಸ್ಥಳಗಳಿಗೆ ತಲುಪಿಸುವ ವೈಟ್ಡ್ರಾಪಿಂಗ್ ವಿಭಾಗ ಮತ್ತು ವಕ್ರಾಕೃತಿ ಬೆಟ್ಟಗುಡ್ಡಗಳು ಸೇರಿದಂತೆ ಕ್ಲಿಷ್ಟಕರ -ದುರ್ಗಮ ಹಾದಿಯಲ್ಲಿ ಕಾರಾರುವಕ್ಕಾಗಿ ಸಂಚರಿಸುವ ಫರ್ಫಾಮೆನ್ಸ್ ಫ್ಲೈಯಿಂಗ್ ವಿಭಾಗ ಸೇರಿದಂತೆ ಮೂರು ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಈಗಾಗಲೇ ಸೋಮವಾರ ಮತ್ತು ಮಂಗಳವಾರ ಜಕ್ಕೂರು ಏರೋಡ್ರಮ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಆಯ್ಕೆಯಾದ ಸ್ಪರ್ಧಿಗಳಿಗೆ ಇಂದು ಯಲಹಂಕ ವಾಯುನೆಲೆಯಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಡ್ರೋಣ್ಗಳು ತಮ್ಮ ಶಕ್ತ್ಯಾನುಸಾರ ಪ್ರದರ್ಶನ ನೀಡಿದವು.ಜರ್ಮನ್, ಇಂಗ್ಲೆಂಡ್ ಉಕ್ರೇನ್, ಇಸ್ರೇಲ್ ದೇಶಗಳು ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಸ್ಪರ್ಧಿಗಳು ತಮ್ಮ ಡ್ರೋಣ್ಗಳ ಹಾರಾಟ ನಡೆಸಿ ನೋಡುಗರ ಗಮನ ಸೆಳೆದರು.
ಸ್ಪರ್ಧೆಯ ಹೊರತಾಗಿ ಎಕ್ಸ್ಕ್ಯಾಲಿಬರ್ ಡ್ರೋಣ್ನ ಪ್ರದರ್ಶನ ಮನ ಸೆಳೆದಿತ್ತು. ಬೆಂಗಳೂರಿನ ಆನೇಕಲ್ನಲ್ಲಿರುವ ಮಾಡಲ್ ಏವಿಯೇಷನ್ ಕಂಪೆನಿಯ ಎಕ್ಸ್ಕ್ಯಾಲಿಬರ್ ಮಾದರಿ ಗಂಟೆಗೆ 300 ಕಿ.ಮೀ. ವೇಗದಲ್ಲಿ ಹಾರಾಟ ನಡೆಸಿ ಮೈನವಿರೇಳಿಸಿತು.
ಯುದ್ಧ ವಿಮಾನಗಳಿಗಿಂತಲೂ ವೇಗವಾಗಿ ನುಗ್ಗಿ ಬಂದ ಎಕ್ಸ್ಕ್ಯಾಲಿಬರ್ ಡ್ರೋಣ್ ಹಕ್ಕಿಯಂತೆ ಬಾಗಿ, ಬಳುಕಿ, ಮೀನಿನಂತೆ ತಿರುಗಿಮುರುಗಿ ಚಲಿಸಿ ಆಶ್ಚರ್ಯ ಮೂಡಿಸಿತು.
ಮೂರು ಲೀಟರ್ ಇಂಧನದ ಟ್ಯಾಂಕ್ ಹೊಂದಿರುವ ಎಕ್ಸ್ಕ್ಯಾಲಿಬರ್ ಸುಮಾರು ಮೂರು ಗಂಟೆ ಆಕಾಶದಲ್ಲೇ ತೇಲುವ ಸಾಮಥ್ರ್ಯ ಹೊಂದಿದೆ.ಸಂಪೂರ್ಣ ರಿಮೋಟ್ ಕಂಟ್ರೋಲ್ ಆಧಾರಿತವಾಗಿರುವುದರಿಂದ ಎಂಥಹದ್ದೇ ಅಪಾಯಕಾರಿ ಸ್ಥಳಕ್ಕಾದರೂ ಇದನ್ನು ವೇಗವಾಗಿ ನುಗ್ಗಿಸಲು ಸಾಧ್ಯವಿದೆ.
ಇದರ ಅತ್ಯುತ್ತಮ ಪ್ರದರ್ಶನ ನೋಡಿದ ಸೇನಾಧಿಕಾರಿಗಳು ಸ್ಥಳದಲ್ಲೇ ಮಾಡಲ್ ಏವಿಯೇಷನ್ ಕಂಪೆನಿಯ ಮುಖ್ಯಸ್ಥ ಆಕಾಶ್ ಅವರನ್ನು ಸಂಪರ್ಕಿಸಿ ಸೇನೆಗೆ ಎಕ್ಸ್ಕ್ಯಾಲಿಬರ್ ಸೇವೆ ಒದಗಿಸುವ ಕುರಿತು ಚರ್ಚೆ ನಡೆಸಿದರು.
ದಕ್ಷ, ವಜ್ರಯುಎವಿ ಎರಡು ಡ್ರೋಣ್ಗಳು ಯುದ್ಧ ವಿಮಾನಗಳ ಮಾದರಿಯನ್ನೇ ಹೊಂದಿದ್ದು, ವಜ್ರ ಯುಎವಿ ಥರ್ಮಕೋಲ್ ಮಾದರಿಯ ವಸ್ತುವಿನಲ್ಲಿ ಸಿದ್ದಗೊಂಡಿದೆ, ದಕ್ಷ ಪ್ಲ್ಯಾಸ್ಟಿಕ್ ಹಾಗೂ ಫೈಬರ್ ಸರಕುಗಳನ್ನು ಬಳಸಿ ತಯಾರಿಸಲಾಗಿದೆ.
ಈ ಎರಡೂ ಮಾದರಿಗಳು ಲೀಥಿಯಂ ಬ್ಯಾಟರಿ ಹೊಂದಿದ್ದು, ಸುಮಾರು ಒಂದರಿಂದ ಒಂದೂವರೆ ಗಂಟೆ ಹಾರಾಡುವ ಸಾಮಥ್ರ್ಯ ಹೊಂದಿದೆ.
ದಕ್ಷ ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯದಿಂದ ಸಂಶೋಧನೆಗೊಂಡಿದ್ದು 18 ಕೆಜಿ ತೂಕ ಹೊಂದಿದೆ.
ವಜ್ರಯುಎವಿ 3.5 ಕೆಜಿ ತೂಕಹೊಂದಿದ್ದು, 4ಸಾವಿರ ಮೀಟರ್ ಎತ್ತರಕ್ಕೆ ಹಾರುವ ಸಾಮಥ್ರ್ಯ ಪಡೆದಿದೆ. ಇದರ ವಿಶೇಷತೆ ಎಂದರೆ ಇದು ಉತ್ತಮ ಸಾಮಥ್ರ್ಯ ಮತ್ತು ದೀರ್ಘ ಅಂತರಕ್ಕೆ ಹಾರುವ ಶಕ್ತಿ ಹೊಂದಿದ್ದು, ಗುರುತು ಮತ್ತು ಮಾರ್ಗದರ್ಶಿ ನಕ್ಷೆ (ನ್ಯಾವಿಗೇಷನ್ ಗೈಡ್)ಯನ್ನು ಅಪ್ಪ್ರೋವ್ ಮಾಡಿದರೆ ಯಾವುದೇ ರಿಮೋಟ್ನ ನೆರವಿಲ್ಲದೆ ಸ್ವಯಂ ಚಾಲಿತವಾಗಿ ಸಂಚರಿಸಲಿದ್ದು, ನಿರ್ಧಿಷ್ಟ ಸ್ಥಳಗಳಿಗೆ ವಸ್ತುಗಳನ್ನು ಕರಾರುವಕ್ಕಾಗಿ ತಲುಪಿಸಲಿದೆ. ಇದರ ಆರಂಭ ಮತ್ತು ಇಳಿಸುವ ಸಂದರ್ಭದಲ್ಲಿ ಮಾತ್ರ ರಿಮೋಟ್ ಬಳಸಲಾಗುವುದು.
ಉಳಿದಂತೆ ಹಲವಾರು ರೀತಿಯ ಡ್ರೋಣ್ಗಳನ್ನು ಸ್ಪರ್ಧೆಯಲ್ಲಿ ತೊಡಗಿಸಲಾಗಿತ್ತು.ಡ್ರೋಣ್ಗಳ ಹಾರಾಟದ ಜತೆಗೆ ಬಹಳಷ್ಟು ಹದ್ದುಗಳು ಕಾಣಿಸಿಕೊಂಡು ಡ್ರೋಣ್ಗಳ ಸ್ಪರ್ಧೆಗಿಳಿದಿದ್ದು ಮನೋರಂಜನಾತ್ಮಕವಾಗಿತ್ತು.
ಬಾನಲ್ಲಿ ಸ್ಪರ್ಧೆಗಳಿದಿದ್ದ ಡ್ರೋಣ್ಗಳ ರೋಚಕ ಸ್ಪರ್ಧೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ ತೀರ್ಪುಗಾರರು ಅಂತಿಮವಾಗಿ ಕೆಲ ಡ್ರೋಣ್ಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಿದರು.