ಸಿಯೋಲ್ – ಭಾರತದ ಆರ್ಥಿಕತೆ ಬುನಾದಿ ಭದ್ರವಾಗಿದೆ ಎಂದು ಸಾರಿರುವ ಪ್ರಧಾನಿ ನರೇಂದ್ರ ಮೋದಿ, ಇದು ಸದ್ಯದಲ್ಲೇ 5 ಲಕ್ಷ ಕೋಟಿ ಡಾಲರ್ ತಲುಪಲಿದೆ ಎಂದು ಹೇಳಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ಎರಡು ದಿನಗಳ ಅಧಿಕೃತ ಪ್ರವಾಸ ಕೈಗೊಂಡಿರುವ ಮೋದಿ ರಾಜಧಾನಿ ಸಿಯೋಲ್ನಲ್ಲಿ ಭಾರತ-ಕೊರಿಯಾ ವಾಣಿಜ್ಯ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ಭಾರತವು ಈಗ ಮತ್ತಷ್ಟು ಮುಕ್ತ ಆರ್ಥಿಕತೆ ಹೊಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ 250 ಶತಕೋಟಿ ಡಾಲರ್ ವಿದೇಶಿ ನೇರ ಬಂಡವಾಳ(ಎಫ್ಡಿಐ) ಆಕರ್ಷಿಸಿದೆ ಎಂದು ತಿಳಿಸಿದರು.
ವರ್ಷದಿಂದ ವರ್ಷಕ್ಕೆ ವಿಶ್ವದ ಯಾವುದೇ ಇತರ ಬೃಹತ್ ದೇಶವು ಶೇ.7ರಷ್ಟು ಪ್ರಗತಿ ಸಾಧಿಸಿಲ್ಲ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು.
ಸುಲಲಿತ ವ್ಯಾಪಾರ ರ್ಯಾಕಿಂಗ್ನಲ್ಲಿ ವಿಶ್ವಬ್ಯಾಂಕ್ ಭಾರತಕ್ಕೆ 77ನೇ ಸ್ಥಾನ ನೀಡಿದೆ.ಮುಂದಿನ ವರ್ಷ ಈ ಪಟ್ಟಿಯಲ್ಲಿ ನಾವು 50ನೇ ಸ್ಥಾನಕ್ಕೇರುವ ಗುರಿ ಹೊಂದಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತವು ಅವಕಾಶಗಳ ತಾಣವಾಗಿದೆ.ನಮ್ಮಲ್ಲಿ ಮತ್ತಷ್ಟು ಬಂಡವಾಳ ಹೂಡುವಂತೆ ಮೋದಿ ಕೊರಿಯಾದ ಉದ್ಯಮಿಗಳಿಗೆ ಕರೆ ನೀಡಿದರು.
ಕೊರಿಯಾ ಪ್ರವಾಸದಲ್ಲಿರುವ ಮೋದಿ, ಮೂನ್ ಜಾಯಿ-ಇನ್ ಸೇರಿದಂತೆ ಅಗ್ರ ನಾಯಕರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಲಿದ್ದಾರೆ.
ದಕ್ಷಿಣ ಕೊರಿಯಾಗೆ ತೆರಳುವುದಕ್ಕೆ ಮುನ್ನ ತಮ್ಮ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಉಭಯ ದೇಶಗಳ ನಡುವಣ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಲಿದೆ ಎಂದು ತಿಳಿಸಿದ್ದರು.