ಬೆಂಗಳೂರು,ಫೆ.16-ರಾಜ್ಯದಲ್ಲಿ ಈ ಬಾರಿ ಲೋಕಸಭೆ ಚುನಾವಣೆ ಏ.15 ಇಲ್ಲವೇ 17ರಂದು ಒಂದೇ ಹಂತದಲ್ಲಿ 28ಕ್ಷೇತ್ರಗಳಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ.
ಮಾರ್ಚ್ ತಿಂಗಳ 2ನೇ ವಾರದಲ್ಲಿ ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಚುನಾವಣೆಗೆ ಮುಹೂರ್ತವನ್ನು ನಿಗದಿಪಡಿಸಲಿದೆ.
ಒಟ್ಟು 30 ರಾಜ್ಯ, 7 ಕೇಂದ್ರಾಡಳಿತ ಪ್ರದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಒಟ್ಟು 8ರಿಂದ 10 ಹಂತದಲ್ಲಿ ಮತದಾನವನ್ನು ನಡೆಸಲಿದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 15 ಇಲ್ಲವೇ 17ರಂದು ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ಏಪ್ರಿಲ್ ತಿಂಗಳ ಅಂತ್ಯಕ್ಕೆ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಪದವಿಪೂರ್ವ ಸೇರಿದಂತೆ ಬಹುತೇಕ ಎಲ್ಲ ಹಂತಗಳ ಪರೀಕ್ಷೆಗಳು ಮುಗಿಯಲಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ.
ಇನ್ನು ಕೆಲವೇ ಕೆಲವು ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯುವುದರಿಂದ ಮತ ಪೆಟ್ಟಿಗೆಗಳನ್ನು ಇಡಲು ಕಾಲೇಜುಗಳ ಸಮಸ್ಯೆಯೂ ಎದುರಾಗುವುದಿಲ್ಲ. ಇದೆಲ್ಲವನ್ನೂ ಪರಿಗಣಿಸಿರುವ ಚುನಾವಣಾ ಆಯೋಗ ಒಂದೇ ಹಂತದಲ್ಲಿ 28 ಲೋಕಸಬಾ ಕ್ಷೇತ್ರಗಳಿಗೆ ಮತದಾನವನ್ನು ನಡೆಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
2014ರ ವೇಳೆ ಕರ್ನಾಟಕದಲ್ಲಿ ಏಪ್ರಿಲ್ 17ರಂದು ಒಂದೇ ಹಂತದ ಮತದಾನ ನಡೆದಿತ್ತು. ಬಹುತೇಕ 15ರಂದೇ ಈ ಬಾರಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಮಾರ್ಚ್ 5ರಂದು ಚುನಾವಣಾ ಆಯೋಗ ಲೋಕಸಭೆ ಚುನಾವಣೆಗೆ ಅಧಿಸೂಚನೆ ಹೊರಡಿಸುವುದು ಬಹುತೇಕ ಖಚಿತವಾಗಿದೆ.
ಮಾ.3ರಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಎನ್‍ಡಿಎ ಮೈತ್ರಿ ಕೂಟದ ಬೃಹತ್ ರ್ಯಾಲಿ ನಡೆಯಲಿದೆ. ಮಹಾಘಟ್‍ಬಂಧನ್‍ಗೆ ಸಡ್ಡು ಹೊಡೆಯುವ ರೀತಿಯಲ್ಲಿ ರ್ಯಾಲಿ ನಡೆಸಲು ಎನ್‍ಡಿಎ ತೀರ್ಮಾನಿಸಿದೆ.
ಹಾವು-ಮುಂಗುಸಿಯಂತಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್‍ಕುಮಾರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಂದು ಬಿಜೆಪಿ ಆಡಳಿತವಿರುವ ಎಲ್ಲ ಮುಖ್ಯಮಂತ್ರಿಗಳು, ಪ್ರಮುಖರು ಭಾಗವಹಿಸಲಿದ್ದಾರೆ. ತಮ್ಮ ವಿರುದ್ಧ ತೊಡೆ ತಟ್ಟುತ್ತಿರುವ ಮಹಾ ಘಟ್‍ಬಂಧನ್‍ಗೆ ತಿರುಗೇಟು ನೀಡಲು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
3ರಂದು ಪಾಟ್ನಾ ಸಮಾವೇಶ ಮುಗಿದ ಬಳಿಕ 5ರಂದು ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡಲಿದೆ.
2014ರಲ್ಲಿ ಏಪ್ರಿಲ್ 17ರಿಂದ ಮೇ 9ರವರೆಗೆ ಒಟ್ಟು 9 ಹಂತಗಳಲ್ಲಿ ಚುನಾವಣೆ ನಡೆದಿತ್ತು. ಮೇ 16ರಂದು ಮತ ಎಣಿಕೆ ನಡೆದು ಫಲಿತಾಂಶ ಅಂದೇ ಪ್ರಕಟಗೊಂಡಿತ್ತು.
16ನೇ ಲೋಕಸಭೆ ಚುನಾವಣೆ ಅವಧಿ ಮೇ 31ಕ್ಕೆ ಕೊನೆಗೊಳ್ಳಲಿದ್ದು, ಅಷ್ಟರೊಳಗೆ ಚುನಾವಣಾ ಪ್ರಕ್ರಿಯೆ ಹಾಗೂ ಸರ್ಕಾರ ರಚನೆಯಾಗಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕು.
ಈ ಹಿನ್ನೆಲೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಗೋವಾ, ಕೇರಳ, ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ಡಯೂಡಾಮನ್, ಅಂಡಮಾನ್ ಡೆಹರಾಡೂನ್ ನಿಕೋಬಾರ್‍ಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ದಕ್ಷಿಣ ಭಾರತದ ರಾಜ್ಯಗಳಿಗೆ ಏಪ್ರಿಲ್ 25ರೊಳಗೆ ಚುನಾವಣೆ ನಡೆಸಲು ಆಯೋಗ ತೀರ್ಮಾನಿಸಿದೆ. ನಕ್ಸಲ್ ಪೀಡಿತ ತೆಲಾಂಗಣದಲ್ಲಿ ಮಾತ್ರ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.
ಅತಿದೊಡ್ಡ ರಾಜ್ಯವೆನಿಸಿದ ಉತ್ತರ ಪ್ರದೇಶ, ನಕ್ಸಲ್ ಪೀಡಿತ ಛತ್ತೀಸ್‍ಗಢ, ಜಾರ್ಖಂಡ್, ಬಿಹಾರ್, ಪಶ್ಚಿಮ ಬಂಗಾಳ, ಒರಿಸ್ಸಾ, ಅಸ್ಸಾಂ ಮತ್ತಿತರ ಕಡೆ 3ರಿಂದ 5 ಹಂತಗಳ ಚುನಾವಣೆ ನಡೆಯಲಿದೆ.