ಆಪರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ರದ್ದು ಕೋರಿ ಕಲಬುರಗಿ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಲಿರುವ ಯಡಿಯೂರಪ್ಪ

ಬೆಂಗಳೂರು,ಫೆ.16- ಆಪರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‍ಐಆರ್ ರದ್ದು ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಲಬುರಗಿ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಆಪರೇಷನ್ ಆಡಿಯೋಗೆ ಸಂಬಂಧಿಸಿದಂತೆ ಬಿಎಸ್ ವೈ ವಿರುದ್ದ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಇದನ್ನು ರದ್ದುಪಡಿಸಬೇಕೆಂದು ಕೋರಿ ಕಲಬುರಗಿ ವಿಭಾಗೀಯ ಪೀಠಕ್ಕೆ ಯಡಿಯೂರಪ್ಪ ಪರ ವಕೀಲರು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಈ ಮೂಲಕ ತಮ್ಮ ವಿರುದ್ದದ ಆರೋಪಗಳನ್ನು ಕಾನೂನಾತ್ಮಕವಾಗಿ ಎದುರಿಸಲು ವೇದಿಕೆ ಸಜ್ಜುಗೊಳಿಸಿದ್ದಾರೆ.

ಹೈಕೋರ್ಟ್ ನ ಕಲಬುರಗಿ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಲು ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಸಿದ್ಧತೆ ಮಾಡಿಕೊಂಡಿದ್ದು, ಅವರೇ ವಕಾಲತ್ತು ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆಪರೇಷನ್ ಕಮಲ ಪ್ರಕರಣದ ಧ್ವನಿ ಸುರುಳಿ ಬಿಡುಗಡೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ಫೆ.13ರಂದು ಎಫ್‍ಐಆರ್ ದಾಖಲಾಗಿತ್ತು. ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಪುತ್ರ ಶರಣಗೌಡ ನೀಡಿದ್ದ ದೂರಿನ ಮೇರೆಗೆ ಪೊಲೀಸರ ತನಿಖೆ ಆರಂಭಗೊಂಡಿದೆ.

ದೂರಿನಲ್ಲಿ ಬಿ.ಎಸ್ ಯಡಿಯೂರಪ್ಪ ಎ-1 ಆರೋಪಿಯಾಗಿದ್ದು, ನಂತರದಲ್ಲಿ ಶಿವನಗೌಡ ನಾಯಕ್, ಪ್ರೀತಂ ಗೌಡ, ಪತ್ರಕರ್ತ ಮರಂಕಲ್ ಸಹ ಆರೋಪಿಗಳಾಗಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆ 19/2019 ಕಲಂ 8 ಮತ್ತು 12 ಹಾಗೂ 120(ಬಿ), ಐಪಿಸಿ 506 ಕಾಯ್ದೆ ಅಡಿ ಈ ಆರೋಪಿಗಳ ವಿರುದ್ದ ಎಫ್‍ಐಆರ್ ದಾಖಲಾಗಿದೆ. ಆಡಿಯೋ ಸಿಡಿ ದಾಖಲೆಯೊಂದಿಗೆ ಶರಣಗೌಡ ಪ್ರಕರಣ ದಾಖಲಿಸಿದ್ದಾರೆ.

ಕಲಬುರಗಿ ಹೈಕೋರ್ಟ್ ಪೀಠದ ವ್ಯಾಪ್ತಿಗೆ ದೇವದುರ್ಗ ಪೊಲೀಸ್ ಠಾಣೆ ಬರುತ್ತದೆ. ಆದ್ದರಿಂದ ಗುರುವಾರ ಪ್ರಕರಣವೊಂದರ ವಾದ ಮಂಡನೆಗೆ ಕಲಬುರಗಿ ಹೈಕೋರ್ಟ್ ಪೀಠಕ್ಕೆ ಆಗಮಿಸಿದ್ದ ಹಿರಿಯ ನ್ಯಾಯವಾದಿ ಹಾಗೂ ಯಡಿಯೂರಪ್ಪ ಪರ ವಕೀಲರಾದ ಸಿ.ವಿ.ನಾಗೇಶ್, ಎಫ್‍ಐಆರ್ ರದ್ದು ಕೋರಿ ಅರ್ಜಿ ಸಲ್ಲಿಕೆಗೆ ಪೂರಕ ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ