ಬೆಂಗಳೂರು, ಫೆ.15- ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಿ ಬಜೆಟ್ ಅಧಿವೇಶನವನ್ನು ಯಶಸ್ವಿಯಾಗಿ ಮುಗಿಸಿರುವ ಸರ್ಕಾರದ ದೋಸ್ತಿ ಪಕ್ಷಗಳು ಲೋಕಸಭೆ ಚುನಾವಣೆಯತ್ತ ಚಿತ್ತ ಹರಿಸಿವೆ.
ಕಾಂಗ್ರೆಸ್-ಜೆಡಿಎಸ್ ಪಕ್ಷದ ಮುಖಂಡರುಗಳು ಲೋಕಸಭೆ ಚುನಾವಣೆ ತಯಾರಿಯಲ್ಲಿ ತೊಡಗಿಸಿಕೊಂಡಿದ್ದು, ಸೀಟು ಹಂಚಿಕೆ ಬಗ್ಗೆ ಮಾತುಕತೆಗೆ ಮುಂದಾಗಿದ್ದಾರೆ.
28 ಲೋಕಸಭೆ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳು ಸೇರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸಿದ್ದು, ಗೆಲುವಿನ ಸಾಧ್ಯತೆ ಇರುವ ಕ್ಷೇತ್ರಗಳಲ್ಲೂ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಬಂಧ ಮಾತುಕತೆ ಆರಂಭವಾಗಿದೆ.
20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದು, ಕಾಂಗ್ರೆಸ್-ಜೆಡಿಎಸ್ ಪಕ್ಷದ ನಾಯಕರು ಸೀಟು ಹಂಚಿಕೆ ಸಂಬಂಧ ಮಾತುಕತೆ ನಡೆಸಿದ್ದಾರೆ.ಜೆಡಿಎಸ್ ಪಕ್ಷ 10 ರಿಂದ 12 ಸ್ಥಾನಗಳನ್ನು ಕೇಳಿದೆ.ಗೆಲ್ಲಲು ಸಾಧ್ಯತೆ ಇರುವ ಆರು ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ಕಾಂಗ್ರೆಸ್ ಹೇಳಿದೆ.
ಕಡೆ ಪಕ್ಷ ಎಂಟು ಸ್ಥಾನಗಳನ್ನು ಜೆಡಿಎಸ್ಗೆ ಬಿಟ್ಟುಕೊಟ್ಟು 20ರಲ್ಲಿ ಕಾಂಗ್ರೆಸ್ ಸ್ಪರ್ಧಿಸಿ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಹೆಚ್ಚು ಸ್ಥಾನಗಳನ್ನು ಗೆಲ್ಲುವ ತಂತ್ರ ರೂಪಿಸಿದ್ದಾರೆ.
ಬೆಂಗಳೂರು ಉತ್ತರ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಉತ್ತರ ಕನ್ನಡ, ಬೆಳಗಾವಿ ಅಥವಾ ಬೀದರ್ ಸ್ಥಾನಗಳನ್ನು ಜೆಡಿಎಸ್ಗೆ ಬಿಟ್ಟುಕೊಡಲು ಕಾಂಗ್ರೆಸ್ ಮುಂದಾಗಿದೆ.ಆದರೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಜೆಡಿಎಸ್ ಕೇಳುತ್ತಿದೆ.ಈ ಕ್ಷೇತ್ರಗಳಲ್ಲಿ ಹಾಲಿ ಕಾಂಗ್ರೆಸ್ ಸಂಸದರಿರುವುದರಿಂದ ಕಾಂಗ್ರೆಸ್ ಪಕ್ಷ ಈ ಕ್ಷೇತ್ರಗಳನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಈ ಸಂಬಂಧ ಮಾತುಕತೆ ಅಂತಿಮವಾದರೆ ಲೋಕಸಭೆ ಚುನಾವಣೆಗೆ ಮೈತ್ರಿ ಸಲೀಸಾಗುತ್ತದೆ ಮತ್ತು ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂಬುದು ಉಭಯ ಪಕ್ಷಗಳ ನಾಯಕರ ಲೆಕ್ಕಾಚಾರವಾಗಿದೆ.
ಈಗಾಗಲೇ ಒಂದೆರಡು ಸುತ್ತಿನ ಮಾತುಕತೆಯನ್ನು ನಾಯಕರುಗಳು ನಡೆಸಿದ್ದಾರೆ.ಗೆಲುವಿನ ಸಾಧ್ಯಾಸಾಧ್ಯತೆ ಬಗ್ಗೆ ಚರ್ಚೆ ಕೂಡ ನಡೆಸಿದ್ದಾರೆ.ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಹೆಚ್ಚಾಗಿರುವುದರಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ಬಂದಿದೆಯಾದರೂ ಇನ್ನೂ ಅಂತಿಮಗೊಂಡಿಲ್ಲ.
ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿ ಒಮ್ಮತದಿಂದ ಕಣಕ್ಕಿಳಿದರೆ ಗೆಲುವು ಸುಲಭವಾಗುತ್ತದೆ.ಈ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಹೆಚ್ಚು ಬೆಂಬಲವಿದೆ. ಜೆಡಿಎಸ್ ಸಾಥ್ ನೀಡಿದರೆ ಈ ಕ್ಷೇತ್ರ ಮೈತ್ರಿ ಪಾಲಾಗುವುದರಲ್ಲಿ ಅನುಮಾನವಿಲ್ಲ ಎಂಬುದು ರಾಜಕೀಯ ಲೆಕ್ಕಾಚಾರ.
ಇದೇ ರೀತಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲೂ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ತಂತ್ರ ರೂಪಿಸಲಾಗಿದೆ.ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಮುಂತಾದ ಕಡೆ ಎರಡೂ ಪಕ್ಷಗಳ ಪ್ರಭಾವ ಅಷ್ಟಾಗಿಲ್ಲ. ಇಲ್ಲಿ ದೋಸ್ತಿ ಪಕ್ಷಗಳು ಯಾವ ರೀತಿ ಚುನಾವಣಾ ತಂತ್ರ ರೂಪಿಸುತ್ತವೆ ಎಂಬುದರ ಮೇಲೆ ಗೆಲುವಿನ ಲೆಕ್ಕಾಚಾರ ನಿಂತಿದೆ.
ಯಾವುದೇ ಬಿರುಕುಂಟಾಗದಂತೆ ಸೀಟು ಹಂಚಿಕೆಯಾಗಿ ಒಮ್ಮತದ ಅಭ್ಯರ್ಥಿಗಳು ಕಣಕ್ಕಿಳಿದರೆ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ.ಈ ನಿಟ್ಟಿನಲ್ಲೇ ದೋಸ್ತಿ ಪಕ್ಷಗಳ ನಾಯಕರು ಮಾತುಕತೆ ನಡೆಸಿದ್ದಾರೆ.
ಸೀಟು ಹಂಚಿಕೆ ಹೊಂದಾಣಿಕೆಯಲ್ಲಿ ಕೊರತೆಯಾದರೆ ಮತ್ತೆ ಮೈತ್ರಿಯಲ್ಲಿ ಬಿರುಕುಂಟಾದರೂ ಆಶ್ಚರ್ಯವಿಲ್ಲ.