ನಿಗಮ ಮಂಡಳಿಗಳಿಗೆ ನೇಮಕ ಮಾಡಲು ಮುಂದಾಗಿರುವ ಜೆಡಿಎಸ್

ಬೆಂಗಳೂರು, ಫೆ.15- ಪಕ್ಷದ ಮುಖಂಡರು, ಕಾರ್ಯಕರ್ತರ ಒತ್ತಡ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಿಗಮ-ಮಂಡಳಿಗಳಿಗೆ ನೇಮಕ ಮಾಡಲು ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ.

ಇನ್ನೊಂದು ವಾರದೊಳಗೆ ನಿಗಮ-ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಕ ಮಾಡಲು ಉದ್ದೇಶಿಸಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಆಪರೇಷನ್ ಕಮಲ, ಸರ್ಕಾರ ಪತನದಂತಹ ವಿಚಾರಗಳೂ ಸೇರಿದಂತೆ ರಾಜಕೀಯವಾಗಿ ಚರ್ಚಿತವಾಗುತ್ತಿದ್ದ ಊಹಾಪೆÇೀಹಗಳಿಗೆ ಸದ್ಯಕ್ಕೆ ತೆರೆ ಬಿದ್ದಿರುವುದರಿಂದ ಜೆಡಿಎಸ್ ಪಾಲಿನ ನಿಗಮ-ಮಂಡಳಿಗಳ ನೇಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಲೋಕಸಭೆ ಚುನಾವಣೆ ಎದುರಿಸಬೇಕೆಂಬ ಉದ್ದೇಶವನ್ನು ವರಿಷ್ಠರು ಹೊಂದಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಪಾಲಿನ ನಿಗಮ-ಮಂಡಳಿಗಳಿಗೆ ಈಗಾಗಲೇ ನೇಮಕವಾಗಿರುವುದರಿಂದ ಜೆಡಿಎಸ್ ವರಿಷ್ಠರ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿದೆ.ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡರೆ ನೀತಿ ಸಂಹಿತೆಗೆ ಅಡ್ಡಿಯಾಗಲಿದೆ.ಹೀಗಾಗಿ ಅದಕ್ಕೂ ಮುನ್ನವೇ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಬೇಕು.ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಅನುಕೂಲವಾಗುವಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಹುರಿದುಂಬಿಸಬೇಕು ಎಂಬ ಲೆಕ್ಕಾಚಾರ ಹಾಕಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಳೆದ ಡಿಸೆಂಬರ್‍ನಿಂದಲೂ ಒಂದಲ್ಲ ಒಂದು ಕಾರಣ ನೀಡುತ್ತ ನಿಗಮ-ಮಂಡಳಿ ನೇಮಕ ಪ್ರಕ್ರಿಯೆ ಮುಂದೂಡುತ್ತ ಬರಲಾಗಿತ್ತು.ಅಷ್ಟರಲ್ಲಿ ಆಪರೇಷನ್ ಕಮಲದ ವಿಚಾರ ಮುಂಚೂಣಿಗೆ ಬಂದು ರಾಜಕೀಯವಾಗಿ ಗೊಂದಲ ನಿರ್ಮಾಣವಾಯಿತು.ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಲಿದೆ ಎಂಬ ವದಂತಿಗಳು ದಟ್ಟವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಬಜೆಟ್ ಅಧಿವೇಶನ ಮುಗಿಯುವವರೆಗೂ ಮುಂದೂಡುವ ನಿರ್ಧಾರಕ್ಕೆ ಬಂದಿದ್ದರು.

ಬಜೆಟ್ ಅಧಿವೇಶನದಲ್ಲಿ ಲೇಖಾನುದಾನಕ್ಕೂ ಒಪ್ಪಿಗೆ ಸಿಕ್ಕಿದ್ದು, ಸದ್ಯಕ್ಕೆ ಆಪರೇಷನ್ ಕಮಲಕ್ಕೂ ಬ್ರೇಕ್ ಬಿದ್ದಿರುವುದರಿಂದ ನಿಗಮ-ಮಂಡಳಿ ನೇಮಕವನ್ನು ಸದ್ಯದಲ್ಲೇ ಮಾಡಬೇಕೆಂಬ ನಿರ್ಧಾರಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಂದಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಈಗಲೂ ನೇಮಕ ಪ್ರಕ್ರಿಯೆ ಮಾಡಲಾಗದಿದ್ದರೆ ಲೋಕಸಭೆ ಚುನಾವಣೆ ನಡೆಯುವವರೆಗೂ ಜೆಡಿಎಸ್ ಪಾಲಿನ ನಿಗಮ-ಮಂಡಳಿಗಳು ಭರ್ತಿಯಾಗುವುದಿಲ್ಲ ಎಂಬ ಅಭಿಪ್ರಾಯವು ಪಕ್ಷದಲ್ಲಿ ಕೇಳಿಬರುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ