ಬೆಂಗಳೂರು, ಫೆ.14- ವಾಲ್ಮೀಕಿ ನಿಗಮದ ಅಡಿಯಲ್ಲಿ ಬರುವ ಯೋಜನೆಗಳನ್ನು ಸಮರ್ಥವಾಗಿ ನಿರ್ವಹಿಸುವ ಜವಾಬ್ದಾರಿಯನ್ನು ನೂತನ ಅಧ್ಯಕ್ಷ ಬಸನಗೌಡ ದದ್ದಲ್ ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ನಗರದಲ್ಲಿಂದು ನಡೆದ ಬಸನಗೌಡ ದದ್ದಲ್ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ನಿಗಮದ ಯೋಜನೆಗಳ ಅನುಷ್ಠಾನಗೊಳಿಸುವ ಮೂಲಕ ಬುದ್ದ, ಬಸವ ಹಾಗೂ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪಾಲಿಸಬೇಕು.ಈ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ನೂತನ ಅಧ್ಯಕ್ಷರಿಗೆ ಸಹಕಾರ ನೀಡುವ ಭರವಸೆ ನೀಡಿದರು.
ಮಹರ್ಷಿ ವಾಲ್ಮೀಕಿಯ ಸಮಗ್ರ ಜೀವನದ ಮಾಹಿತಿ ಒದಗಿಸಲು ಬೆಂಗಳೂರಿನಲ್ಲಿ ವಾಲ್ಮೀಕಿ ಮ್ಯೂಸಿಯಂ ಸ್ಥಾಪನೆಗೆ ಅಗತ್ಯ ನಿವೇಶನವನ್ನು ಈಗಾಗಲೇ ಗುರುತಿಸಲಾಗಿದೆ.ಮುಂದಿನ ದಿನಗಳಲ್ಲಿ ಮ್ಯೂಸಿಯಂ ಕಾಮಗಾರಿ ಆರಂಭವಾಗಲಿದೆ ಎಂದರು.
ಬಸವರಾಜ ದದ್ದಲ್ ಮಾತನಾಡಿ, ತಮಗೆ ಪಕ್ಷ ಮತ್ತು ಸರ್ಕಾರ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ತಿಳಿಸಿದರು.
ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ, ಸಂಸದೀಯ ಕಾರ್ಯದರ್ಶಿ ಡಿ.ಎಸ್.ಹುಲಗೇರಿ, ಶಾಸಕ ಭೋಪ್ರಾಜ್ ಮತ್ತಿತರರಿದ್ದರು.