ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ: ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಬೆಂಗಳೂರು, ಫೆ.13-ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಹೈಕಮಾಂಡ್‍ಗೂ ಚಾಲೆಂಜ್ ಮಾಡಿಲ್ಲ ಎಂದು ಅತೃಪ್ತ ಶಾಸಕರ ಬಣದ ನಾಯಕತ್ವ ವಹಿಸಿದ್ದ ರಮೇಶ್ ಜಾರಕಿ ಹೊಳಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ. ಹಾಗೆಂದ ಮಾತ್ರಕ್ಕೆ ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಪಕ್ಷಕ್ಕೆ ಈಗಲೂ ಬದ್ಧರಾಗಿದ್ದೇವೆ. ಹೈಕಮಾಂಡ್ ನಾಯಕರಿಗೆ ಸೆಡ್ಡು ಹೊಡೆದಿದ್ದೇವೆ ಎಂಬುದು ಸುಳ್ಳು ಎಂದರು.

ನನ್ನ ಮಗನ ಮದುವೆ ಇದ್ದಿದ್ದರಿಂದ ಕಾಂಗ್ರೆಸ್ ಶಾಸಕಾಂಗ ಸಭೆ ಮತ್ತು ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಲು ಆಗಲಿಲ್ಲ. ಈಗ ವಿಧಾನಸಭೆಯಲ್ಲಿ ಬಜೆಟ್ ಅಂಗೀಕಾರಕ್ಕೆ ಮತದಾನ ನಡೆಯುವುದರಿಂದ ಇಲ್ಲಿ ಭಾಗವಹಿಸಲು ಬಂದಿದ್ದೇನೆ. ನಾನು ಮುಂಬೈನಲ್ಲಿ ಇದ್ದುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಅಲ್ಲಿ ಸಂಬಂಧಿಕರಿದ್ದಾರೆ ಹಾಗಾಗಿ ಅಲ್ಲಿಗೆ ಹೋಗಿದ್ದೆ. ಮತ್ತೆ ಮುಂಬೈಗೆ ಹೋಗುತ್ತೇವೆ ಅದನ್ನು ಅಪರಾಧ ಎನ್ನುವ ಅಗತ್ಯವಿಲ್ಲ. ನಾವು ಆಪರೇಷನ್ ಕಮಲಕ್ಕೆ ತುತ್ತಾಗಿಲ್ಲ ಎಂದು ಹೇಳಿದರು.

ಬಿಜೆಪಿ ಶಾಸಕ ಅಶ್ವತ್ಥಮನಾರಾಯಣ ನನ್ನ ಸ್ನೇಹಿತರು.ಅ ವರ ಮನೆಗೆ ಹೋಘುತ್ತೇನೆ ಏನೀವಾಗ…? ನಾವು ಯಾರ ಮನೆಗೂ ಹೋಗಬಾರದಾ?

ಮಾಧ್ಯಮದವರೇ ಎಲ್ಲಾ ಹೇಳ್ತೀರ, ನೀವೇ ಮಾತಾಡ್ತೀರ, ನಿರ್ಧಾರವನ್ನು ನೀವೇ ತಿಳಿಸ್ತೀರ, ನೀವೇನುಜಡ್ಜ್‍ಗಳೇ ಎಂದು ಪ್ರಶ್ನಿಸಿದರು.

ಒಂದು ಹಂತದಲ್ಲಿ ನನ್ನನ್ನು ಹೀರೋ ಮಾಡಿದ್ರಿ, ವಿಲನ್ ಮಾಡಿದ್ರಿ, ಏಕಾಂಗಿ ಮಾಡಿದ್ದು ನೀವೇ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ