ನವದೆಹಲಿ: ಇತ್ತೀಚೆಗಷ್ಟೇ ಕೋಲ್ಕತ್ತಾದಲ್ಲಿ ಕೇಂದ್ರದ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳನ್ನು ಒಗ್ಗೂಡಿಸಿ ಪ್ರಾದೇಶಿಕ ಶಕ್ತಿ ಪ್ರದರ್ಶಿಸಿದ್ರು. ಈ ಬೆನ್ನಲ್ಲೇ ಮತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಬೃಹತ್ ಸಮಾವೇಶ ನಡೆಸುತ್ತಿದ್ದಾರೆ. ಇಂದು ಜಂತರ್ ಮಂತರ್ನಲ್ಲಿ ಪಶ್ಚಿಮ ಬಂಗಾಳ ಸಿಎಂ ‘ದೀದಿ’ ಆಯೋಜಿಸಿರುವ ಬೃಹತ್ ಸಮಾವೇಶಕ್ಕೆ ಎಲ್ಲಾ ವಿಪಕ್ಷದ ನಾಯಕರು ಆಗಮಿಸಲಿದ್ದಾರೆ.
ಅಲ್ಲದೇ ಈ ಬಾರಿ ಸಮಾವೇಶದ ಬೃಹತ್ ರ‍್ಯಾಲಿಯನ್ನು ಸಿಎಂ ಅರವಿಂದ್ ಕೇಜ್ರಿವಾಲ್ ಉದ್ಘಾಟಿಸಲಿದ್ದಾರೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ದೇಶವನ್ನು ರಕ್ಷಿಸಲು ಈ ಸಮಾವೇಶ ನಡೆಸುತ್ತಿದ್ದೇವೆ. ಸಂಯುಕ್ತ ಭಾರತ ಕಟ್ಟಲು ಮೈತ್ರಿಕೂಟ ಅತ್ಯಗತ್ಯ. ಕೇಂದ್ರ ಸರ್ಕಾರದ ವಿರುದ್ಧ ಇಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳ ಶಕ್ತಿ ಪ್ರದರ್ಶನ ಮಾಡುತ್ತೇವೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಸಲುವಾಗಿ ಎಲ್ಲದಕ್ಕೂ ಸಿದ್ದವಾಗಿದ್ದೇವೆ. ಈ ಬಾರಿ ಮೋದಿಯವರನ್ನು ಸೋಲಿಸಲು ಪಣತೊಟ್ಟಿದ್ದೇವೆ ಎಂದು ಸಿಎಂ ಮಮತಾ ಬ್ಯಾನರ್ಜಿಯವರು ಪತ್ರಿಕಾಗೋಷ್ಠಿ ನಡೆಸಿ ಈ ಹಿಂದೆಯೇ ತಿಳಿಸಿದ್ದಾರೆ.
ಇನ್ನು ಎನ್ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಇದರ ನಿಗದಿತ ಸಮಯ ಮುಗಿದಿದೆ. ಲೋಕಸಭೆ ಚುನಾವಣೆಯ ದಿನಾಂಕವೂ ಮುಂದಿನ 15 ದಿನಗಳಲ್ಲಿ ತಿಳಿಯಲಿದೆ. ಈ ಫ್ಯಾಸಿಸ್ಟ್ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇವೆ. ಇಲ್ಲಿಯೇ ಹೊಸ ಸರ್ಕಾರವೊಂದನ್ನು ರಚಿಸಲಿದ್ದೇವೆ. ದೇಶವನ್ನು ಅಭಿವೃದ್ದಿಯ ಪಥದಲ್ಲಿ ಕೊಂಡೊಯ್ಯಬೇಕು. ನಮ್ಮ ನೆಲದಲ್ಲಿ ಪ್ರಜಾಪ್ರಭುತ್ವ ಮತ್ತು ಸಮಗ್ರತೆ ಜೀವಂತವಾಗಿರಬೇಕು ಎಂದು ದೀದಿ ಹೇಳಿದ್ದಾರೆ.
ಈ ಹಿಂದೆಯಿಂದಲೂ ಕೋಲ್ಕತ್ತಾದಲ್ಲಿ ಪ್ರಧಾನಿ ‘ಮೋದಿ ಸರ್ಕಾರ ಹಠಾವೋ’ ಎಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಕೂಡ ಈಗಾಗಲೇ ಬಿಜೆಪಿ ವಿರುದ್ಧದ ಪ್ರಾದೇಶಿಕ ಪಕ್ಷಗಳ ಸಮಾವೇಶ ಆಯೋಜಿಸಿದ್ದಾರೆ. ಇಲ್ಲಿ ತೃತೀಯ ರಂಗದ ನಾಯಕರು ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಮೋದಿಯನ್ನು ಗದ್ದುಗೆಯಿಂದ ಇಳಿಸಲು ಸಜ್ಜಾಗಿದ್ದಾರೆ.
ಲೋಕಸಭಾ ಚುನಾವಣೆ ಹೊತ್ತಲ್ಲಿಯೇ ಆಡಳಿತರೂಢ ಬಿಜೆಪಿ ಸರ್ಕಾರವನ್ನು ಸೋಲಿಸಲು ಪ್ರಾದೇಶಿಕ ಪಕ್ಷಗಳು ಒಂದಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಹೇಗಾದರೂ ಮಾಡಿ ಕಟ್ಟಿ ಹಾಕಲೇಬೇಕೆಂದು ವಿಪಕ್ಷಗಳನ್ನು ಒಗ್ಗೂಡಿಸಿರುವ ಟಿಎಂಸಿ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಪಶ್ಚಿಮಬಂಗಾಳದಲ್ಲಿ ಮೆಗಾರ‍್ಯಾಲಿ ನಡೆಸಿದ್ದರು. ಇಲ್ಲಿನ ಸಮಾವೇಶದಲ್ಲಿ ಕರ್ನಾಟಕದಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಸಿಎಂ ಕುಮಾರಸ್ವಾಮಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಂಡಿದ್ದಾರೆ.
ಹಾಗೆಯೇ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಪಾಟೀದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್, ಎಸ್, ಬಿಎಸ್ಪಿ ನಾಯಕರು ಕೂಡ ಕೈಜೋಡಿಸಿದ್ದರು ಎನ್ನಲಾಗಿದೆ.
ಜತೆಗೆ ಇದು ಕೇವಲ ಒಬ್ಬ ವ್ಯಕ್ತಿಯನ್ನು(ಪ್ರಧಾನಿ ನರೇಂದ್ರ ಮೋದಿ) ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸುವ ಪ್ರಶ್ನೆಯಲ್ಲ. ನಾವೆಲ್ಲ ಒಗ್ಗಟ್ಟಾಗಿ ಬಲಪಂಥೀಯ ಸಿದ್ದಾಂತವನ್ನು ಸೋಲಿಸಬೇಕಾಗಿದೆ. ನಿಜಕ್ಕೂ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಸತ್ಯಾಂಶವನ್ನು ತಿಳಿದುಕೊಳ್ಳಬೇಕಾಗಿದೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರಕ್ಕೆ ಬೇಕಾಗಿರುವುದು ಸಮಾಜ ಮತ್ತು ದೇಶವನ್ನು ಒಡೆಯುವ ಕೆಲಸ ಎಂದು ಪ್ರಾದೇಶಿಕ ಪಕ್ಷದ ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎನ್ನುತ್ತಿವೆ ಮೂಲಗಳು.