ಬೆಂಗಳೂರು,ಫೆ.11-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಪಕ್ಷದ ಮುಖಂಡ ವಿಜುಗೌಡ ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿಧಾನಪರಿಷತ್ಗೆ ನೇಮಕ ಮಾಡಲು 25 ಕೋಟಿ ರೂ. ಕೇಳಿದ್ದರು ಎಂದು ವಿಜುಗೌಡರಿಂದ ಆರೋಪ ಕೇಳಿಬಂದಿತ್ತು.
ಈಗ ಬಿಜೆಪಿ ಇದನ್ನೇ ಮುಂದಿಟ್ಟುಕೊಂಡು ಮುಖ್ಯಮಂತ್ರಿ ವಿರುದ್ಧ ತಿರುಗಿ ಬೀಳಲು ಸಜ್ಜಾಗಿದೆ. ತಮ್ಮ ವಿರುದ್ಧ ಬಿಡುಗಡೆ ಮಾಡಿದ್ದ ಆಡಿಯೋಗೆ ಪ್ರತಿಯಾಗಿ ವಿಡಿಯೋ ಬಿಡುಗಡೆ ಮಾಡಿ ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕುವ ಗುರಿ ಇಟ್ಟುಕೊಂಡಿದೆ.
ಈ ನಿಟ್ಟಿನಲ್ಲಿ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಇಂದು ಬೆಳ್ಳಂಬೆಳ್ಳಗೆ ವಿಜುಗೌಡ ಪಾಟೀಲ್ ಆಗಮಿಸಿ ಯಡಿಯೂರಪ್ಪನವರ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ.
ವಿಡಿಯೋದಲ್ಲಿರುವ ಸಂಭಾಷಣೆ, ಹಣಕ್ಕೆ ಬೇಡಿಕೆ ಇಟ್ಟಿರುವುದು, ಯಾವ ಸಮಯದಲ್ಲಿ , ಎಲ್ಲಿ ಮಾತುಕತೆ ನಡೆದಿತ್ತು, ಸದನದಲ್ಲಿ ಇದನ್ನು ಹೇಗೆ ಬಿಡುಗಡೆ ಮಾಡಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ.
ನಿನ್ನೆಯಷ್ಟೇ ವಿಜಾಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಜುಗೌಡ ಪಾಟೀಲ್ , ನನ್ನನ್ನು ವಿಧಾನಪರಿಷತ್ಗೆ ನೇಮಕ ಮಾಡಲು ಕುಮಾರಸ್ವಾಮಿ ಅವರು 25 ಕೋಟಿ ಹಣ ಕೇಳಿದ್ದರು ಎಂದು ಹೇಳಿದ್ದರು.
ಗುರುಮಿಟ್ಕಲ್ ಶಾಸಕ ನಾಗನಗೌಡ ಅವರನ್ನು ಪಕ್ಷಕ್ಕೆ ಕರೆತರಲು ಅವರ ಪುತ್ರ ಶರಣಗೌಡರ ಮೂಲಕ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಬಿಎಸ್ವೈ ಮಾತುಕತೆ ನಡೆಸಿದ್ದರು. ಈ ಮಾತುಕತೆಯ ವಿವರಗಳುಳ್ಳ ಆಡಿಯೋ ಬಿಡುಗಡೆಯಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿತ್ತು.
ಇದೀಗ ವಿಜುಗೌಡ ಪಾಟೀಲ್ ಪ್ರಕರಣವನ್ನೇ ಬಿಜೆಪಿ ದಾಳ ಮಾಡಿಕೊಂಡು ಕುಮಾರಸ್ವಾಮಿಗೆ ತಿರುಗೇಟು ನೀಡಲು ಮುಂದಾಗಿದೆ.