ಕಾಂಗ್ರೇಸ್-ಜೆಡಿಎಸ್ ನೈತಿಕತೆ ಉನ್ನತ ಮಟ್ಟದಲ್ಲಿದೆ: ಮಾಜಿ ಸಚಿವ ಸಿ.ಟಿ.,ರವಿ

ಬೆಂಗಳೂರು, ಫೆ.11-ಕಾಂಗ್ರೆಸ್-ಜೆಡಿಎಸ್ ನೈತಿಕತೆ ಉನ್ನತ ಮಟ್ಟದಲ್ಲಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಇಂದಿಲ್ಲಿ ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋದಲ್ಲಿ ತಾವು ಮಾತನಾಡಿದ ನಂತರ ತಿರುಚಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ನೈತಿಕ ತಳಹದಿಯ ಮೇಲೆ ನಿಂತಿದ್ದು, ರಾಜೀನಾಮೆಯನ್ನು ಕೇಳುತ್ತಿದ್ದಾರೆ. ನೈತಿಕತೆ ಏನೆಂಬುದನ್ನು ಕಾಂಗ್ರೆಸ್-ಜೆಡಿಎಸ್‍ನವರಿಂದ ಕಲಿಯಬೇಕಾಗಿದೆ ಎಂದು ಟೀಕಿಸಿದರು.

ವೀರಪ್ಪ ಮೊಯ್ಲಿ ಸಿಎಂ ಆಗಿದ್ದಾಗ ಭೆರೇಗೌಡ ಅವರಿಗೆ 5 ಲಕ್ಷ ರೂ. ಆಮಿಷವೊಡ್ಡಿದ್ದ ಆಡಿಯೋ ಟೇಪ್ ಹಗರಣ ನೆನಪಿಲ್ಲವೇ?ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‍ನಲ್ಲಿದ್ದ ಶಾಸಕರಾದ ಜಮೀರ್‍ಅಹಮ್ಮದ್ ಖಾನ್, ಚಲುವರಾಯಸ್ವಾಮಿ, ಬಾಲಕೃಷ್ಣ, ರಮೇಶ್ ಬಂಡಿಸಿದ್ದೇಗೌಡ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದು ಹೇಗೆ? ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಜೆಪಿಯ ಬಂಡಾಯ ಶಾಸಕರನ್ನು ಗೋವಾ-ಚೆನ್ನೈಗೆ ಕರೆದುಕೊಂಡು ಹೋಗಿರಲಿಲ್ಲ. ಆ ಪಕ್ಷಗಳ ಟ್ರ್ಯಾಕ್ ರೆಕಾರ್ಡ್ ಈ ರೀತಿ ಇದೆ. ಹೀಗಾಗಿ ನೈತಿಕತೆ ಬಗ್ಗೆ ಮಾತನಾಡುತ್ತಾರೆ. ವಿಧಾನಸಭೆ ಚುಣಾವಣಾ ಪೂರ್ವದಲ್ಲಿ ಜೆಡಿಎಸ್, ಕಾಂಗ್ರೆಸ್ ನಾಯಕರು ಪರಸ್ಪರ ಟೀಕೆ ಮಾಡಿದ್ದು, ಈಗ ಮೈತ್ರಿ ಸರ್ಕಾರ ನಡೆಸುತ್ತಿಲ್ಲವೇ ಎಂದರು.

ರಾಜಕಾರಣ ನಿಂತ ನೀರಲ್ಲ. ಮಾತುಕತೆಗಳು ನಡೆಯುತ್ತವೆ. ಕೆಲವು ಬಹಿರಂಗವಾಗುತ್ತವೆ, ಇನ್ನೂ ಕೆಲವು ಬಹಿರಂಗವಾಗುವುದಿಲ್ಲ. ದೊಡ್ಡ ದೊಡ್ಡವರ ನಡುವೆಯೂ ಮಾತುಕತೆಗಳಾಗಿರುತ್ತವೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ