ಬೆಂಗಳೂರು,ಫೆ.11-ಸಭಾಧ್ಯಕ್ಷರ ಮೇಲೆ ಆರೋಪ ಕೇಳಿಬಂದಿರುವ ಧ್ವನಿಸುರುಳಿಯ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಪಕ್ಷಭೇದ ಮರೆತು ವಿಧಾನ ಸಭೆಯಲ್ಲಿಂದು ಒತ್ತಾಯಿಸಿದ ಘಟನೆ ನಡೆಯಿತು.
ಇಂದು ಸದನ ಸಮಾವೇಶಗೊಂಡಾಗ ರಮೇಶ್ಕುಮಾರ್ ಅವರು ವಿಷಯ ಪ್ರಸ್ತಾಪಿಸಿ, ಮೇಲ್ನೋಟಕ್ಕೆ ಜವಾಬ್ದಾರಿ ಸ್ಥಾನದಲ್ಲಿರುವವರು ತಮ್ಮ ಮೇಲೆ ಗಂಭೀರ ಆರೋಪ ಬರುವ ರೀತಿ ಮಾತನಾಡಿರುವುದು ಧ್ವನಿಸುರುಳಿಯ ಸಂಭಾಷಣೆಯಲ್ಲಿದೆ. ಆದರೆ ಯಾರು ಎಂಬುದು ಗೊತ್ತಾಗಿಲ್ಲ .ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಿದ್ದರಾಮಯ್ಯ ಅವರು ತಮ್ಮನ್ನು ಸಭಾಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ.ಅವರು ಕೂರಿಸದಿದ್ದರೆ ಇಂತ ಯಾತನೆಯನ್ನು ಅನುಭವಿಸಬೇಕಿರಲಿಲ್ಲ ಎಂದರು.
ಸಿದ್ದರಾಮಯ್ಯ ಮಾತನಾಡಿ, ಸಭಾಧ್ಯಕ್ಷರ ಮೇಲೆ ಎಳ್ಳಷ್ಟು ಅನುಮಾನ ಬರಲು ಸಾಧ್ಯವಿಲ್ಲ. ಬಹಳ ವರ್ಷಗಳಿಂದ ಬಹಳ ಹತ್ತಿರದಿಂದ ಹಾಗೂ ವೈಯಕ್ತಿಕವಾಗಿ ಸಾರ್ವಜನಿಕ ಬದುಕನ್ನು ನೋಡಿದ್ದು, ನಿಮ್ಮ ಬಗ್ಗೆ ಅಪಾರ ಗೌರವವಿದೆ.ಸಭಾಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದು ಸದನದ ಗೌರವನ್ನು ಎತ್ತಿಹಿಡಿಯುವ ಜವಾಬ್ದಾರಿ ಎಲ್ಲ ಸದಸ್ಯರ ಮೇಲಿದೆ ಎಂದರು.
ಭಾವನಾತ್ಮಕ ಮಾತುಕತೆಯಲ್ಲ. ಸತ್ಯಾಂಶ ಎಲ್ಲರಿಗೂ ಗೊತ್ತಾಗಬೇಕು.ಶಾಸಕರ ರಾಜೀನಾಮೆ ಒಪ್ಪಿಕೊಳ್ಳಲು 50 ಕೋಟಿ ರೂ.ನೀಡಲಾಗಿದೆ ಎಂಬ ಅಂಶ ಧ್ವನಿಸುರುಳಿಯಲ್ಲಿ ಸ್ಪಷ್ಟವಾಗಿದೆ.ಇಂಥ ಆರೋಪದಿಂದ ಹೊರಬರಬೇಕು.ಇದು ಗಂಭೀರವಾದ ವಿಚಾರ.ಕಳೆದ ಆರೇಳು ತಿಂಗಳಿನಿಂದ ಏನೇನು ನಡೆಯುತ್ತಿದೆ ಎಂಬುದು ಗೊತ್ತಿದೆ.ಧ್ವನಿ ಸುರುಳಿ ಸಂಭಾಷಣೆ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರನ್ನು ಪತ್ತೆಹಚ್ಚಬೇಕು.ರಾಜಕೀಯ ದುರದ್ದೇಶದಿಂದ ರಾಜಕೀಯ ಲಾಭಕ್ಕಾಗಿ ಕಪ್ಪು ಚುಕ್ಕೆ ಮೂಡಿಸುವ ಪ್ರಯತ್ನ ನಡೆದಿದೆ. ಯಾವೊಬ್ಬ ಸದಸ್ಯರು ಸಭಾಧ್ಯಕ್ಷರ ಕಡೆ ಬೊಟ್ಟು ಮಾಡಿ ತೋರುವಂತಿಲ್ಲ. ಆ ಮಟ್ಟಕ್ಕೆ ಕಾರ್ಯ ನಿರ್ವಹಿಸತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ಸಭಾಧ್ಯಕ್ಷರ ಮೇಲೆ ಆರೋಪವಿರುವ ಧ್ವನಿಸುರುಳಿ ಅತ್ಯಂತ ಗಂಭೀರ ಸ್ವರೂಪದ್ದು. ಎಲ್ಲಾ ರೀತಿಯ ಸತ್ಯಾಂಶ ಹೊರಬರಬೇಕು.ಪ್ರೇರಣೆ ಕೊಟ್ಟವರೂ ಇರುತ್ತಾರೆ. ಘಟನೆಯ ಬಗ್ಗೆ ಎಲ್ಲರಿಗೂ ನೋವಿದೆ. ಇಂಥ ಸಭಾಧ್ಯಕ್ಷರ ಬಗ್ಗೆ ಹಗುರವಾಗಿ ಮಾತನಾಡುವುದಕ್ಕೆ ಕೊನೆ ಹಾಡಬೇಕು.ಹೀಗಾಗಿ ಎಷ್ಟೇ ದೊಡ್ಡವರಾದರೂ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಉಪ್ಪು ತಿಂದವರು ನೀರು ಕುಡಿಯಬೇಕು:
ಬಿಜೆಪಿ ಹಿರಿಯ ಶಾಸಕ ಸುರೇಶ್ಕುಮಾರ್ ಮಾತನಾಡಿ, ಇಡೀ ಸದನ ಸಭಾಧ್ಯಕ್ಷರ ಮೇಲೆ ವಿಶ್ವಾಸವಿಟ್ಟಿದೆ. ಸಭಾಧ್ಯಕ್ಷರ ಮೇಲೆ ಲವಲೇಷವೂ ಇಲ್ಲ. ತುಂಬ ವ್ಯಕ್ತಿಗತ ತೀರ್ಮಾನ ಬೇಡ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಸಭಾಧ್ಯಕ್ಷ ಸ್ಥಾನಕ್ಕೆ ಅವಮಾನ ಮಾಡಿದವರು ಯಾರು?ಯಾಕೆ ಮಾತನಾಡಿದರು ಪತ್ತೆಹಚ್ಚಬೇಕು.ಇದಕ್ಕಾಗಿ ಸದನ ನಿಮ್ಮೊಂದಿಗಿರುತ್ತದೆ ಎಂದರು.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಭಾವನಾತ್ಮಕ ತೀರ್ಮಾನ ಬೇಡ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬರೆದಿರುವ ಪತ್ರ ಆಧರಿಸಿ ಕ್ರಮ ಕೈಗೊಳ್ಳಬೇಕು.ಶಾಸಕರ ಮರ್ಯಾದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಳಾಗುತ್ತಿದೆ.ಗೌರವ ಉಳಿಸಿ ರಕ್ಷಿಸಬೇಕಾದವರು ನೀವು.
ಈ ಹಿಂದೆ ಶಾಸಕರನ್ನು ದೇವರಿಗೆ ಸಮಾನ ಎಂದು ಬಿಂಬಿಸಲಾಗುತ್ತಿತ್ತು. ಈಗ ಟಿವಿಯಲ್ಲಿ ಜೈಲು ಜೈಲು ಎಂದು ತೋರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ನಾವೆಲ್ಲ ನಿಮ್ಮೊಂದಿಗಿದ್ದೇವೆ ಎಂದು ಹೇಳಿದರು.
ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಸಭಾಧ್ಯಕ್ಷರ ಮೇಲೆ ಆರೋಪ ಹೊರಿಸಿರುವ ಸಂಭಾಷಣೆಯ ಧ್ವನಿಸುರುಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸಭಾಧ್ಯಕ್ಷರ ಹೆಸರು ಪ್ರಸ್ತಾಪಿಸಿರುವುದು ಪ್ರಜಾಪ್ರಭುತ್ವದ ಹೆಸರಿಗೆ ಕಳಂಕ.
ಸಭಾಧ್ಯಕ್ಷರು ಕರ್ತವ್ಯ ಪ್ರಜ್ಞೆ ಮಾರ್ಗದರ್ಶನ ಮಾಡಬೇಕು. ಸಭಾಧ್ಯಕ್ಷರು ಸದನದ ಘನತೆ ಗೌರವ, ಪಾವಿತ್ರ್ಯ ಕಾಪಾಡಲು ಎಲ್ಲರ ಸಹಕಾರ ಬೇಕು ಎಂದರು.
ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಸಭಾಧ್ಯಕ್ಷರ ಆರೋಪ ಬಂದಿರುವುದು ಪ್ರಜಾಸತ್ತೆಗೆ ದೊಡ್ಡ ಗಂಡಾಂತರ. ಶಾಸಕರ ಹಕ್ಕು ಕಾಪಾಡಬೇಕು, ಸದನದ ಪಾವಿತ್ರ್ಯತೆಯನ್ನೂ ಕಾಪಾಡಬೇಕು.ತಪ್ಪಿತಸ್ಥರನ್ನು ಪತ್ತೆ ಮಾಡಬೇಕು.ಈ ವಿಚಾರವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ದು ಸದನದ ಗೌರವನ್ನು ಎತ್ತಿಹಿಡಿಯಬೇಕು ಎಂದರು.
ಧ್ವನಿಸುರುಳಿ ನೈಜ್ಯವೋ ನಿಕಲಿಯೋ ತನಿಖೆಯಾಗಲಿ
ಬಿಜೆಪಿಯ ಹಿರಿಯ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸಭಾಧ್ಯಕ್ಷರ ಮೇಲೆ ಆರೋಪ ಬಂದಿರುವುದು ಸರಿಯಲ್ಲ. ಆ ಧ್ವನಿಸುರುಳಿ ನೈಜ್ಯವೋ ನಕಲಿಯೋ ಇತ್ಯರ್ಥವಾಗಬೇಕು. ಎಲ್ಲವೂ ಹೊರಬರಲು ಸೂಕ್ತ ತನಿಖೆಯಾಗಬೇಕು. ಸದನದ ಹೊರಗೆ ನಡೆದಿರುವ ವಿಚಾರ ಇದು ಮುಂದೆಂದು ಆಗಬಾರದು. ಈ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಒತ್ತಾಯಿಸಿದರು.