ವಿಧಾನಸಭೆಯಲ್ಲಿ ಗಂಭೀರ ಚರ್ಚೆಗೊಳಗಾದ ಸಿಡಿ ಮಾತುಕತೆ

ಬೆಂಗಳೂರು, ಫೆ.11- ಆಪರೇಷನ್ ಕಮಲಕ್ಕೆ ಸಂಬಂಧಪಟ್ಟಂತೆ ಫೆ.8ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ ಸಿಡಿ ವಿಧಾನಸಭೆಯಲ್ಲಿಂದು ಗಂಭೀರ ಚರ್ಚೆಗೆ ಒಳಗಾಗಿ ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ಹುದ್ದೆ ತೊರೆಯುವ ಮಾತುಗಳನ್ನಾಡಿದಾಗ ಪಕ್ಷಾತೀತವಾಗಿ ಅವರನ್ನು ಹುದ್ದೆ ತೊರೆಯದಂತೆ ಮನವಿ ಮಾಡಿತು.ಇಡೀ ಚರ್ಚೆಯಲ್ಲಿ ಸದನ ಅತ್ಯಂತ ಭಾವನಾತ್ಮಕವಾಗಿ ಸ್ಪಂದಿಸಿದ್ದು ಕಲಾಪದ ಆರಂಭದ ಹೈಲೈಟ್ಸ್ ಆಗಿದ್ದವು.

ಇಂದು ಬೆಳಗ್ಗೆ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಸ್ವಪ್ರೇರಣೆಯಿಂದ ವಿಷಯ ಪ್ರಸ್ತಾಪಿಸಿದ ಸ್ಪೀಕರ್ ಅವರು, ಫೆ.8ರಂದು ಮಧ್ಯಾಹ್ನ 12.10ಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನಗೊಂದು ಪತ್ರ ಬರೆದು ಸಿಡಿ ಕಳುಹಿಸಿದ್ದಾರೆ. ಅದರಲ್ಲಿ ಕೆಲವರು ಸಂಭಾಷಣೆ ನಡೆಸಿದ್ದು, ಶಾಸಕರು ರಾಜೀನಾಮೆ ಕೊಟ್ಟರೆ ಅದನ್ನು ಅಂಗೀಕರಿಸಲು ಸ್ಪೀಕರ್ ಜತೆ ಮಾತುಕತೆ ನಡೆಸಲಾಗಿದೆ. 50 ಕೋಟಿ ರೂ. ಡೀಲ್ ಆಗಿದೆ. ಒಂದು ವೇಳೆ ಅವರು ಅಂಗೀಕರಿಸದೇ ಇದ್ದರೆ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಪಡೆದುಕೊಳ್ಳುವ ಬಗ್ಗೆಯೂ ಮಾತುಕತೆ ನಡೆದಿದೆ.

ಈ ಹಿಂದಿನ ಸ್ಪೀಕರ್ 12 ಶಾಸಕರನ್ನು ಉಚ್ಛಾಟಿಸಿದಾಗ ಅದನ್ನು ಕೋರ್ಟ್‍ನಲ್ಲಿ ಪ್ರಶ್ನಿಸಲಾಗಿತ್ತು. ಹೋರಾಟ ಮಾಡಿ ನಾವು ಗೆದ್ದಿದ್ದೇವೆ. ನೀವು ಹೆದರುವುದು ಬೇಡ ಎಂದು ತಮ್ಮ ಎದುರಿಗಿರುವ ತಮ್ಮ ವ್ಯಕ್ತಿಗೆ ಈ ರೀತಿ ಹೇಳುತ್ತಿದ್ದಾರೆ. ಹೇಳಿದ ವ್ಯಕ್ತಿ ಈ ಹಿಂದೆ 12 ಮಂದಿ ಶಾಸಕರಲ್ಲಿ ಒಬ್ಬರಾಗಿದ್ದಾರೆ. ಅವರು ಸದನದಲ್ಲಿ ಇರುವುದು ಮಾತುಕತೆಯಲ್ಲಿ ಸೂಚ್ಯವಾಗಿ ತಿಳಿದು ಬರುತ್ತಿದೆ.

ಮುಖ್ಯಮಂತ್ರಿಯವರು ಮಾಧ್ಯಮಗಳಿಗೆ ಆಡಿಯೋ ಬಿಡುಗಡೆ ಮಾಡುವಾಗ ನನ್ನ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ. ಅದಕ್ಕೆ ನಮ್ರತೆಯ ಧನ್ಯವಾದ ಹೇಳುತ್ತೇನೆ. ಮುಂದೆಯೂ ಹಾಗೆಯೇ ಬದುಕುತ್ತೇನೆ ಎಂದರು.

ಆಡಿಯೋದಲ್ಲಿ ಮಾತನಾಡಿರುವ ಶಾಸಕರ ಪರಿಚಯ ನನಗೆ ಹೆಚ್ಚಿಲ್ಲ. ಅವರ ಧ್ವನಿ ನನಗೆ ಗೊತ್ತಿಲ್ಲ. ನಾನು ಈ ಸದನದ ಎಲ್ಲಾ ಸದಸ್ಯರಿಂದ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಸದನದಲ್ಲಿ ಯಾರಿಗೂ ಪಕ್ಷಪಾತ ಮಾಡಿಲ್ಲ. ನನಗೆ ದುಡ್ಡು ಕೊಟ್ಟಿರುವುದಾಗಿ ಆಡಿಯೋದಲ್ಲಿ ಮಾತನಾಡಿರುವುದು ದುರಂತ.ನಾನು ಈಗಲೂ ದೊಮ್ಮಲೂರಿನ ಅಮರಜ್ಯೋತಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ. ಎರಡು ಕೊಠಡಿ, ಕೆಳಗೊಂದು ಕಚೇರಿ ಇರುವ ಚಿಕ್ಕ ಮನೆ ಅದು. 50 ಕೋಟಿ ಸಣ್ಣ ಮೊತ್ತ ಅಲ್ಲ. ಅದನ್ನು ಇಡಲೂ ಅಲ್ಲಿ ಜಾಗವಿಲ್ಲ. ನನ್ನ ಮನೆಗೆ ವಿಧಾನಸಭಾಧ್ಯಕ್ಷರ ನಿವಾಸ ಎಂದು ಬೋರ್ಡ್ ಕೂಡ ಹಾಕಿಸಿಲ್ಲ. ಅಕ್ಕಪಕ್ಕದವರಿಗೆ ತೊಂದರೆಯಾಗದಂತೆ ಎಚ್ಚರವಹಿಸಿದ್ದೇನೆ. ಸರ್ಕಾರಿ ಬಂಗ್ಲೆಯನ್ನೂ ಪಡೆದಿಲ್ಲ. ಯಾರು ಬೇಕಾದರೂ ನನ್ನ ಮನೆಯನ್ನು ಪರಿಶೀಲಿಸಬಹುದು.ನನ್ನಂತಹವರಿಗೆ ಇಂತಹ ಶಿಕ್ಷೆಯೇ ಎಂದು ಭಾವೋದ್ವೇಗಕ್ಕೆ ಒಳಗಾದರು.

ನಾನು ಉತ್ತಮ ಸಂಸದೀಯ ಪಟುಗಳು, ಪ್ರಾಮಾಣಿಕರನ್ನು ಪಕ್ಷಾತೀತವಾಗಿ ಗೌರವಿಸುತ್ತೇನೆ. ಫೆ.8ರಂದು ಆಡಿಯೋ ನನಗೆ ತಲುಪಿದಾಗ 12.10ಗಿತ್ತು.12.30ಕ್ಕೆ ಬಜೆಟ್ ಮಂಡನೆಗೆ ಅವಕಾಶ ನೀಡುವುದು ಸಾಂವಿಧಾನಿಕ ಬದ್ಧತೆಯಾಗಿದ್ದು, ಅನಂತರ ಸಂಪ್ರದಾಯದಂತೆ ಕಲಾಪ ಮುಂದೂಡಿಕೆಯಾಯಿತು.ಶನಿವಾರ, ಭಾನುವಾರ ರಜೆ ಇತ್ತು.ಈ ಎರಡು ರಾತ್ರಿಗಳನ್ನು ಹೇಗೆ ಕಳೆದಿದ್ದೇನೆ ಎಂಬುದು ನನಗೆ ಗೊತ್ತು.ಸಮಯ ಕಳೆಯುವ ಸಲುವಾಗಿಯೇ ರಾಯಚೂರಿಗೆ ರೈಲಿನಲ್ಲಿ ಹೋಗಿದ್ದೆ.ಆ ಕಡೆಯಿಂದ ರಸ್ತೆ ಮಾರ್ಗವಾಗಿ ಬಂದಿದ್ದೇನೆ. ಸತ್ಯ ಸಾಭೀತಾಗಲೇಬೇಕು.

ಆಡಿಯೋದಲ್ಲಿ ಮಾತನಾಡಿರುವವರು ಯಾರು?ಅವರು ನನ್ನನ್ನು ಅಥವಾ ನನ್ನ ಸಂಬಂಧಿಕರನ್ನು ಸಂಪರ್ಕಿಸಿದ್ದಾರೆಯೇ?ಎಲ್ಲಿ ಯಾವಾಗ ಹಣ ಕೊಟ್ಟಿದ್ದಾರೆ, ಯಾವ ಡಿನಾಮಿನೇಷನ್‍ನಲ್ಲಿ ಹಣ ಕೊಟ್ಟಿದ್ದಾರೆ ಎಂಬುದನ್ನು ಹೇಳಬೇಕು.ರಾಜಕೀಯ ಜೀವನದಲ್ಲಿ ಪ್ರಾಮಾಣಿಕವಾಗಿದ್ದವರ ಘನತೆಗೆ ಧಕ್ಕೆ ತಂದರೆ ಅದು ಸಾವಿಗಿಂತಲೂ ಕೆಟ್ಟ ಶಿಕ್ಷೆ ಎಂದು ವಾಜಪೇಯಿ ಸಂಸತ್‍ನಲ್ಲಿ ಹೇಳಿದ್ದರು. ನಾನು ವಾಜಪೇಯಿ ಅವರ ಸರಿಸಮನಲ್ಲ. ಆದರೆ, ನನ್ನ ಮೇಲಿನ ಆರೋಪಕ್ಕೆ ನ್ಯಾಯ ಸಿಗಬೇಕಿದೆ. ಹಾಗಾಗಿ ಸರ್ಕಾರಕ್ಕೆ ಸೂಚನೆ ನೀಡಲು ಬಯಸುತ್ತೇನೆ ಎನ್ನುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸಚಿವ ಕೃಷ್ಣಬೈರೇಗೌಡ ಅವರು, ನೀವು ತೀರ್ಮಾನ ತೆಗೆದುಕೊಳ್ಳುವ ಮೊದಲು ನನ್ನ ವಾದವನ್ನೂ ಕೇಳಬೇಕು ಎಂದು ಮನವಿ ಮಾಡಿದರು.

ಈ ವಿಷಯವಾಗಿ ಪ್ರಸ್ತಾಪಿಸಲು ಕೃಷ್ಣಬೈರೇಗೌಡ ಅವರು ನನ್ನ ಕಚೇರಿಗೆ ಸೂಚನಾ ಪತ್ರ ಕಳುಹಿಸಿರುವುದು ಗೊತ್ತಾಗಿದೆ.ಸದಸ್ಯರಾಗಿ ನಿಮಗೆ ಮಾತನಾಡುವ ಹಕ್ಕಿದೆ ಎಂದು ಸ್ಪೀಕರ್ ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟರು.

ಒಂದು ಹಂತದಲ್ಲಿ ಸ್ಪೀಕರ್ ಅವರು ತಮ್ಮ ತಾಯಿಯ ಹಿತವಚನಗಳನ್ನು ನೆನಪಿಸಿಕೊಂಡಾಗ ದುಃಖದಿಂದ ಅವರ ಗಂಟಲು ಉಬ್ಬಿಬಂತು.ನನ್ನ ತಾಯಿ ನನ್ನ ಗುರು.ಅವರನ್ನು 28 ವರ್ಷಗಳ ಹಿಂದೆ ಕಳೆದುಕೊಂಡರೆ, ಆದರೆ, ಅವರ ಹಿತವಚನಗಳನ್ನು ನಾನು ಪಾಲಿಸುತ್ತಿದ್ದೇನೆ ಎಂದು ಹೇಳಿದರು.

ಆಡಿಯೋದಲ್ಲಿ ಕೇಳಿಬಂದಿರುವ ಆರೋಪ ನನ್ನ ವೈಯಕ್ತಿಕ ವಿಷಯ ಎಂದಾದರೆ ನಾನು ಸದನದಲ್ಲಿ ಮುಂದುವರೆಯಲು ಬಯಸುವುದಿಲ್ಲ. ಈ ಆರೋಪವನ್ನು ತಲೆ ಮೇಲೆ ಹೊತ್ತುಕೊಂಡು ನನ್ನ ಪತ್ನಿ, ಮಕ್ಕಳು, ನನ್ನ ಅಣ್ಣನಿಗೆ ಹಾಗೂ ಮನೆಯವರಿಗೆ ಮುಖ ತೋರಿಸಲು ಆಗುವುದಿಲ್ಲ. ಆರೋಪ ಮಾಡಿದವರು ನನ್ನನ್ನು ನಿಷ್ಪಕ್ಷಪಾತವಾಗಿ ಕೆಲಸ ಮಾಡದಂತೆ ಕಟ್ಟಿ ಹಾಕುವ ಹುನ್ನಾರ ನಡೆಸಿರಬಹುದು. ಬೀದಿಯಲ್ಲಿ ಹೋಗುವವರು ಇದನ್ನು ಮಾತನಾಡಿಲ್ಲ. ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಮಾತನಾಡಿದ್ದಾರೆ ಎಂದರು.

ಬೆಳಗ್ಗೆ 11.30ಕ್ಕೆ ಆರಂಭವಾದ ಸದನ ಸುದೀರ್ಘವಾಗಿ ಈ ವಿಷಯವಾಗಿಯೇ ಚರ್ಚೆ ನಡೆಸಿತು.ಬಿಜೆಪಿಯ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಈಶ್ವರಪ್ಪ, ಜೆಡಿಎಸ್‍ನ ಎ.ಟಿ.ರಾಮಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರರು ತಮ್ಮದೇ ದಾಟಿಯಲ್ಲಿ ವಿಷಯ ಮಂಡನೆ ಮಾಡಿದ್ದಲ್ಲದೆ, ಸ್ಪೀಕರ್ ಅವರ ಬಗ್ಗೆ ಅನುಮಾನ ಪಡುವುದನ್ನು ಖಂಡಿಸಿದರು.

ರಮೇಶ್‍ಕುಮಾರ್ ಅವರ ವೈಯಕ್ತಿಕ ಜೀವನ ನೋಡಿದವರು ಅವರ ಮೇಲಿನ ಆರೋಪಗಳನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂಬರ್ಥದಲ್ಲಿ ಮಾತನಾಡಿದರು.

ಜೆ.ಸಿ.ಮಾಧುಸ್ವಾಮಿಯವರಂತೂ ಭಾವನಾತ್ಮಕವಾಗಿ ಈ ವಿಷಯವನ್ನು ತೆಗೆದುಕೊಂಡು ಹುದ್ದೆ ತೊರೆಯುವ ನಿರ್ಧಾರ ಮಾಡಬೇಡಿ ಎಂದು ಬಲವಾಗಿ ಪ್ರತಿಪಾದಿಸಿದರು.

ಇಡೀ ಸದನ ಈ ಚರ್ಚೆಯನ್ನು ಅತ್ಯಂತ ಸೂಕ್ಷ್ಮವಾಗಿ ಆಲಿಸುತ್ತಿತ್ತು.ಒಂದು ಹಂತದಲ್ಲಿ ಕಾಂಗ್ರೆಸ್‍ನ ಶಾಸಕ ಬಿ.ಕೆ.ಸಂಗಮೇಶ್ ಅವರು, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರ ಬಳಿ ಬಂದು ಚರ್ಚೆ ಮಾಡಲು ಬಂದಾಗ ಸಚಿವ ಡಿ.ಕೆ.ಶಿವಕುಮಾರ್ ಅವರು ಸುಮ್ಮನೆ ಹೋಗು ಎಂದು ಗದರಿ ಕಳುಹಿಸಿದರು.ಅಷ್ಟೂ ಗಂಭೀರವಾಗಿ ಇಂದಿನ ಕಲಾಪ ಚರ್ಚೆ ನಡೆಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ