ಆಂದ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು,ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಕೇಂದ್ರ ಸರ್ಕಾರಕ್ಕೆ ತಿರುಗೇಟು: ಚಂದ್ರಬಾಬು ನಾಯ್ಡು

ನವದೆಹಲಿ, ಫೆ.11- ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ಪರಮೋಚ್ಛ ನಾಯಕ ಚಂದ್ರಬಾಬು ನಾಯ್ಡು ಅವರು ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ಆಂಧ್ರಪ್ರದೇಶ ಮರು ಸಂಘಟನೆ ಕಾಯ್ದೆ 2014ರ ಅನ್ವಯ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ದೆಹಲಿಯಲ್ಲಿ ಇಂದು ಟಿಡಿಪಿ ಪಕ್ಷ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದೆ.

ಸತ್ಯಾಗ್ರಹಕ್ಕೂ ಮೊದಲು ಸಿಎಂ ನಾಯ್ಡು ಮಹಾತ್ಮ ಗಾಂಧಿ ಸಮಾಧಿ ರಾಜ್ ಘಾಟ್‍ಗೆ ತೆರಳಿ ರಾಷ್ಟ್ರಪಿತನಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಆಂಧ್ರ ಪ್ರದೇಶ ಭವನಕ್ಕೆ ಧಾವಿಸಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ತಮ್ಮ ಧರ್ಮ ಪೋರಾಟ ದೀಕ್ಷಾ ಸತ್ಯಾಗ್ರಹ ಆರಂಭಿಸಿದರು.

ಇನ್ನು ನಾಯ್ಡು ಅವರ ಪ್ರತಿಭಟನೆಗೆ ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಧುರೀಣ ಡಾ.ಫಾರುಖ್ ಅಬ್ದುಲ್ಲಾ , ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ವಿರೋಧ ಪಕ್ಷಗಳ ಅನೇಕ ಮುಖಂಡರು ಸಾಥ್ ನೀಡಿದ್ದಾರೆ.

ವಿಪಕ್ಷಗಳ ಪ್ರಮುಖ ಮುಖಂಡರು ಸಹ ಬೆಂಬಲ ನೀಡಿದ್ದಾರೆ. ಇನ್ನು ಇಂದಿನ ಸತ್ಯಾಗ್ರಹದಲ್ಲಿ ಆಂಧ್ರ ಪ್ರದೇಶದ ಸಚಿವರು, ಟಿಡಿಪಿ ಸಂಸದರು, ಶಾಸಕರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.

ಅಂತೆಯೇ ಇಂದಿನ ಧರಣಿ ಬಳಿಕ ನಾಳೆ ರಾಷ್ಟ್ರಪತಿ ಕೋವಿಂದ್‍ರನ್ನು ಭೇಟಿ ಮಾಡಲಿರುವ ಸಿಎಂ ನಾಯ್ಡು ಮನವಿ ಪತ್ರ ಸಲ್ಲಿಕೆ ಮಾಡಲಿದ್ದಾರೆ.

ಮೋದಿ ವಿರುದ್ಧ ವಾಗ್ದಾಳಿ: ನಿರಶನ ಸಂದರ್ಭದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ ಧರ್ಮ ಪಾಲಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

2002ರಲ್ಲಿ ಗುಜರಾತ್‍ನಲ್ಲಿ ಭುಗಿಲೆದ್ದ ಕೋಮು ಗಲಭೆ ಸಂದರ್ಭದಲ್ಲಿ ಆಗಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ರಾಜ್ಯದಲ್ಲಿ ರಾಜಧರ್ಮ ಪಾಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಆಂಧ್ರಪ್ರದೇಶ ವಿಷಯದಲ್ಲೂ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದೆ ಈಗ ಪ್ರಧಾನಿ ನರೇಂದ್ರ ಮೋದಿ ರಾಜಧರ್ಮ ಅನುಸರಿಸದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.

ನಮ್ಮ ಬೇಡಿಕೆಗಳನ್ನು ಹೇಗೆ ಈಡೇರಿಸಿಕೊಳ್ಳಬೇಕೆಂಬುದು ಚೆನ್ನಾಗಿ ಗೊತ್ತಿದೆ ಎಂದು ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ ನಾಯ್ಡು ಆಂಧ್ರಪ್ರದೇಶದ ಬಗ್ಗೆ ಕೇವಲವಾಗಿ ಮಾತನಾಡಿದರೆ ಹೇಗೆ ಪಾಠ ಕಲಿಸಬೇಕೆಂಬುದು ನಮಗೆ ಚೆನ್ನಾಗಿ ಗೊತ್ತು ಎಂದು ಗುಡುಗಿದರು.

2014ರಲ್ಲಿ ವಿಭಜನೆಯಾದ ನಂತರ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಘೋಷಿಸಲಾಗಿತ್ತು. ಐದು ವರ್ಷವಾದರೂ ಅದು ಈಡೇರಿಲ್ಲ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ