ಬೆಂಗಳೂರು ಫೆ.10- ದೃಷ್ಟಿ ಇಲ್ಲದವರಿಗೆ ಸಹಾಯ ಮಾಡಿದರೆ, ಒಬ್ಬರ ಬದುಕನ್ನೇ ಬದಲಾಯಿಸಿದಂತಾಗುತ್ತದೆ. ಸಾಧ್ಯವಾದಷ್ಟು ದೃಷ್ಟಿದೋಷ ಇರುವವರಿಗೆ ಸಹಾಯ ಮಾಡಿ ಎಂದು ಮಿಷನ್ ವಿಷನ್ ಸಂಸ್ಥಾಪಕಿ ಆನ್ಯಾ ಅರೋರಾ ಮಕ್ಕಳಿಗೆ ಸಲಹೆ ನೀಡಿದರು.
ಚೈಲ್ಡ್ ರೈಟ್ಸ್ ಅಂಡ್ ಯು(ಸಿಆರ್ವೈ) ಮತ್ತು ಅನನ್ಯ ಎಜುಕೇಷನ್ ಅಂಡ್ ಎಂಪವರ್ ಟ್ರಸ್ಟ್ ಸಹಯೋಗದಲ್ಲಿ ಹೆಣ್ಣೂರು ಮುಖ್ಯರಸ್ತೆಯ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಿಷನ್ ವಿಷನ್ ಉಚಿತ ನೇತ್ರ ಶಿಬಿರದಲ್ಲಿ ಅವರು ಮಾತನಾಡಿದರು.
ವಿಷನ್ ಮಿಷನ್ನ ಗುರಿ ಕೇವಲ ದೃಷ್ಟಿ ದೋಷ ನಿವಾರಣೆಯಷ್ಟೇ ಅಲ್ಲದೆ, ದೃಷ್ಟಿ ಸಾಮಥ್ರ್ಯ ನೀಡಿ ಜೀವನ ಸುಧಾರಣೆ ಮಾಡುವ ಉದ್ದೇಶ ಹೊಂದಿದೆ. ನೇತ್ರದಾನ ಹಾಗೂ ದೃಷ್ಟಿದೋಷ ನಿವಾರಣೆಯಿಂದ ಪ್ರತಿಯೊಬ್ಬರ ಜೀವನಕ್ಕೆ ಶಕ್ತಿ ದೊರೆಯುವ ಜೊತೆಗೆ ಉಜ್ವಲ ಭವಿಷ್ಯ ರೂಪಿಸಿದಂತಾಗುತ್ತದೆ ಎಂದರು.
ಅನ್ಯ ಅವರ ಮಿಷನ್ ವಿಷನ್ ಯೋಜನೆಗೆ ದಾನಿಗಳು ಹಾಗೂ ಸ್ವಯಂಸೇವಕರು ನೆರವು ನೀಡಬಹುದಾಗಿದ್ದು, ದಾನಿಗಳು ನೀಡಿದ ನೆರವನ್ನು ದೃಷ್ಟಿ ದೋಷ ಇರುವ ಮಕ್ಕಳಿಗೆ ತಲುಪಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ಆಂಥೋನಿ ಸೆಬಾಸ್ಟಿಯನ್ ಮಾತನಾಡಿ, ದೃಷ್ಟಿ ದೋಷ ಇರುವ ಮಕ್ಕಳ ಬಗ್ಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಕಾಳಜಿ ವಹಿಸುತ್ತಿರುವುದು ಉತ್ತಮ ಫಲಿತಾಂಶ ನೀಡಲಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಅಮರ್ ಆಳ್ವ, ಸದಸ್ಯ ವೈ.ಮರಿಸ್ವಾಮಿ, ಸಿಆರ್ವೈನ ದಕ್ಷಿಣ ಭಾರತದ ಪ್ರಧಾನ ವ್ಯವಸ್ಥಾಪಕ ಡಾ.ಜಾನ್ ರಾಬರ್ಟ್ ಮತ್ತಿತರರು ಉಪಸ್ಥಿತರಿದ್ದರು.