ಸಾಮೂಹಿ ವಿವಾಹ ಎಂಬುದು ಜನಪರ ಕಾರ್ಯವಾಗಿದೆ: ಮೇಯರ್ ಗಂಗಾಬಿಕೆ

ಬೆಂಗಳೂರು,ಫೆ.10-ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆಯ 20ನೇ ವಾರ್ಷಿಕೋತ್ಸವ ಅಂಗವಾಗಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ 60 ಜೋಡಿಗಳು ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದರು.

ದಾವಣಗೆರೆ ಮೂಲದ ರೇಣುಕಾ ಮತ್ತು ಬೆಂಗಳೂರಿನ ಕಾಕ್ಸ್‍ಟೌನ್‍ನ ಮಹೇಶ್ವರ್ ಈ ಇಬ್ಬರು ವಿಕಲಚೇತನರಾಗಿದ್ದು, ಪರಸ್ಪರ ಒಪ್ಪಿ ಮದುವೆಯಾದುದು ಇಂದಿನ ಸಾಮೂಹಿಕ ವಿವಾಹದ ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಮೇಯರ್ ಗಂಗಾಂಬಿಕೆ ಮಾತನಾಡಿ, ಹೆಚ್ಚು ಖರ್ಚು ಮಾಡಿ ಅದ್ಧೂರಿಯಾಗಿ ಮದುವೆಯಾಗುವುದನ್ನು ತಪ್ಪಿಸಿ ಸಾಮೂಹಿಕವಾಗಿ ವಿವಾಹವಾಗುವುದು ಉತ್ತಮ ಕಾರ್ಯ. ತಾಯಿ ಬನಶಂಕರಿಯ ಸಮ್ಮುಖದಲ್ಲಿ ವಿವಾಹ ಬಂಧನಕ್ಕೊಳಗಾಗುವುದು ಪುಣ್ಯ ಎಂದರು.

ಸಾಮೂಹಿಕ ವಿವಾಹ ಎಂಬುದು ಜನಪರ ಕಾರ್ಯವಾಗಿದ್ದು, ಕಳೆದ 20 ವರ್ಷಗಳಿಂದ ಇಂತಹದ್ದೊಂದು ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವ ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆಯ ಕಾರ್ಯ ಶ್ಲಾಘನೀಯ ಎಂದರು.

ವೇದಿಕೆಯ ಅಧ್ಯಕ್ಷ ಎ.ಎಚ್.ಬಸವರಾಜ್ ಮತ್ತು ತಂಡ ಈ ಕಾರ್ಯವನ್ನು ಇನ್ನು ಮುಂದೆಯೂ ಮುಂದುವರೆಸಲಿ. ಇವರಿಗೆ ಪಾಲಿಕೆಯಿಂದ ಅಗತ್ಯ ನೆರವು ನೀಡುವುದಾಗಿ ಹೇಳಿದರು.

ಎ.ಎಚ್.ಬಸವರಾಜ್ ಮಾತನಾಡಿ, ಆಡಂಬರದ ಮದುವೆಗೆ ಕಡಿವಾಣ ಹಾಕಿ ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಕಳೆದ 20 ವರ್ಷದಿಂದ ಬನಶಂಕರಿ ತಾಯಿ ಆಶೀರ್ವಾದದಿಂದ ಸಾಮೂಹಿಕ ವಿವಾಹ ಕಾರ್ಯ ನಡೆಸಿಕೊಂಡು ಬರುತ್ತಿದ್ದೇವೆ. ನೂರಾರು ಜೋಡಿಗಳು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸತಿಪತಿಗಳಾಗಿ ಉತ್ತಮ ಜೀವನ ನಡೆಸುತ್ತಿದ್ದಾರೆ. ಈ ಕಾರ್ಯವನ್ನು ತಮ್ಮ ಜೀವನದ ಪರ್ಯಂತ ನಡೆಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ನೂತನ ವಧು-ವರರಿಗೆ ತಾಳಿ, ಸೀರೆ,ರವಿಕೆ, ಪಂಚೆ ಮತ್ತಿತರ ವಸ್ತುಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಉಪಮೇಯರ್ ಭದ್ರೇಗೌಡ, ಮಾಜಿ ಮೇಯರ್ ಎಸ್.ಕೆ.ನಟರಾಜ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಂಸದರಾದ ಪಿ.ಸಿ.ಮೋಹನ್, ಶಾಸಕರಾದ ಡಾ.ಉದಯ ಬಿ.ಗರುಡಾಚಾರ್, ಎಂ.ಕೃಷ್ಣಪ್ಪ, ಸತೀಶ್ ರೆಡ್ಡಿ, ರವಿಸುಬ್ರಹ್ಮಣ್ಯ, ಚಲನಚಿತ್ರ ನಟ ಶ್ರೀನಾಥ್, ಮುಖಂಡರಾದ ಜೆ.ಆರ್.ದಾಮೋದರ್ ನಾಯ್ಡು, ದೇವರಾಜುಲು, ಎಚ್.ಕೆ.ಮುತ್ತಪ್ಪ, ವಿದ್ಯಾಸಾಗರ್, ನಾರಾಯಣಸ್ವಾಮಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ