ಬೆಂಗಳೂರು, ಫೆ.10- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಂದು ಜನೋಪಯೋಗಿ ಔಷಧಿ ಕೇಂದ್ರವನ್ನು ತೆರೆಯಲಾಗುವುದು ಎಂದು ಕೇಂದ್ರ ಯೋಜನೆ ಮತ್ತು ಸಾಂಖಿಕ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ದಾಸರಹಳ್ಳಿ ಕ್ಷೇತ್ರದ ಮಲ್ಲಸಂದ್ರ ವಾರ್ಡ್‍ನ ಬೈಲಪ್ಪ ಸರ್ಕಲ್‍ನಲ್ಲಿ ಜನೋಪಯೋಗಿ ಔಷಧಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಜನೋಪಯೋಗಿ ಔಷಧ ಕೇಂದ್ರದಲ್ಲಿ ಜನರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ನಾಗರಿಕರ ಆರೋಗ್ಯದ ದೃಷ್ಟಿಯಿಂದ ದುಬಾರಿ ಬೆಲೆಯಲ್ಲಿರುವ ಗುಣಮಟ್ಟದ ಅಗತ್ಯ ಔಷಧಿಗಳು ಅತಿ ಕಡಿಮೆ ಬೆಲೆಯಲ್ಲಿ ಕೇಂದ್ರ ಸರ್ಕಾರ ಕೊಡುತ್ತಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಮಾಡಿ ಹೆಚ್ಚಿನ ಬಹುಮತದಿಂದ ಗೆಲ್ಲುವು ಸಾಧಿಸಿ ಆಯ್ಕೆಯಾಗುವ ವಿಶ್ವಾಸವನ್ನು ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಸ್.ಮುನಿರಾಜು ಮಾತನಾಡಿ, ಸಾಮಾನ್ಯ ಮೆಡಿಕಲ್‍ನಲ್ಲಿ ಸಿಗುವ ಎಲ್ಲಾ ಔಷಧಗಳ ಈ ಜನೋಪಯೋಗಿ ಔಷಧಿಯ ಕೇಂದ್ರಲ್ಲಿ ಸಿಗುತ್ತವೆ. ಕ್ಷೇತ್ರದ ಎಲ್ಲಾ ಬಡವರು, ಮಧ್ಯಮ ವರ್ಗದವರು ಮಲ್ಲಸಂದ್ರವಾರ್ಡ್‍ನಲ್ಲಿ ಇಂದಿನಿಂದಲೇ ಸಿಗುತ್ತವೆ. ಅವುಗಳನ್ನು ಉಪಯೋಗ ಮಾಡಿಕೊಳ್ಳಬಹುದು ಎಂದು ಹೇಳಿದರು.
ಬಿಬಿಎಂಪಿ ಸದಸ್ಯ ಎನ್.ಲೋಕೇಶ್, ಬಿಜೆಪಿ ಮುಖಂಡ ಚಂದ್ರಪ್ಪ, ಆರ್.ಸಿ.ದೂರೆ ಉಪಸ್ಥಿತಿರಿದ್ದರು.