ಆಡಿಯೋವನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಿ ಕೊಡಲಾಗುವುದು: ಗೃಹ ಸಚಿವ ಎಂಬಿ.ಪಾಟೀಲ್

ಹುಬ್ಬಳ್ಳಿ, ಫೆ.9- ಜೆಡಿಎಸ್ ಪಕ್ಷದ ಸದಸ್ಯರನ್ನು ಸೆಳೆಯಲು ಬಿ.ಎಸ್.ಯಡಿಯೂರಪ್ಪ ನಡೆಸಿರುವ ಪ್ರಯತ್ನದ ಆಡಿಯೋ ಪ್ರಕರಣವನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಆಡಿಯೋವನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಿ ಕೊಡಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಪ್ರಕರಣದಲ್ಲಿ ಸ್ಪೀಕರ್ ಅವರ ಹೆಸರು ಕೂಡ ಪ್ರಸ್ತಾಪವಾಗಿದ್ದು, ಅವರು ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಬಿಎಸ್‍ವೈ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು. ಅಲ್ಲಿಂದ ವರದಿ ಬಂದ ಮೇಲೆ ಯಾವುದು ಸತ್ಯ ಎಂದು ತಿಳಿಯಲಿದೆ ಎಂದು ಹೇಳಿದರು.

ಏನಾದರೂ ಮಾಡಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಬೇಕೆಂಬ ಪ್ರಯತ್ನವನ್ನು ಬಿಜೆಪಿ ನಿರಂತರವಾಗಿ ಮಾಡುತ್ತಿದೆ. ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್‍ಗೆ ಅನುಮೋದನೆಯೂ ಸಿಗಲಿದೆ. ಇದರಲ್ಲಿ ಯಾವ ಅನುಮಾನವೂ ಬೇಡ ಎಂದು ಸ್ಪಷ್ಟಪಡಿಸಿದರು.

ನಾಲ್ಕು ಮಂದಿ ಕಾಂಗ್ರೆಸ್ ಶಾಸಕರು ಗೈರಾದರೆ ಬಜೆಟ್ ಅನುಮೋದನೆಗೆ ತೊಂದರೆಯಾಗುವುದಿಲ್ಲ. ಅತೃಪ್ತ ಶಾಸಕರನ್ನು ಹೋಟೆಲ್‍ನಲ್ಲಿ ಕೂಡಿಹಾಕಿ ಶಾಸಕರ ಮೊಬೈಲನ್ನು ಕಿತ್ತುಕೊಂಡಿದ್ದಾರೆ. ಆದರೂ ಅವರು ಎಲ್ಲೂ ಹೋಗುವುದಿಲ್ಲ. ನಮ್ಮ ಪಕ್ಷದಲ್ಲಿಯೇ ಇರುತ್ತಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ