ಬೆಂಗಳೂರು,ಫೆ.9- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ನೇರವಾಗಿ ಅಖಾಡಕ್ಕಿಳಿದಿರುವ ಬಿಜೆಪಿ, ಅವರ ವಿರುದ್ಧ ವಿಧಾನಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಲು ಲಂಚ ಕೇಳಿದ ಧ್ವನಿ ಮತ್ತು ದೃಶ್ಯವಿರುವ ಸಿಡಿಯನ್ನು ತನಿಖೆಗೊಳಪಡಿಸುವಂತೆ ಒತ್ತಾಯಿಸಿದೆ.
ವಿಜಾಪುರದ ವಿಜುಗೌಡ ಎಂಬುವರಿಗೆ ಈ ಹಿಂದೆ ಕುಮಾರಸ್ವಾಮಿ ಅವರು ವಿಧಾನಪರಿಷತ್ಗೆ ಸದಸ್ಯರನ್ನಾಗಿ ಮಾಡಲು 25 ಕೋಟಿ ಲಂಚ ಕೇಳಿದ್ದರು ಎಂಬ ಆರೋಪ ಹಿಂದೆಯೇ ಕೇಳಿಬಂದಿತ್ತು.
ಈಗ ಇದನ್ನೇ ಮತ್ತೊಮ್ಮೆ ಕೆದಕಲು ಮುಂದಾಗಿರುವ ಬಿಜೆಪಿ ಸೋಮವಾರ ವಿಧಾನಸಭೆ ಕಲಾಪದ ವೇಳೆ ಪ್ರಶ್ನಿಸಿ ತನಿಖೆ ನಡೆಸುವಂತೆ ವಿಧಾನಸಭೆಯ ಸ್ಪೀಕರ್ ರಮೇಶ್ಕುಮಾರ್ ಅವರಿಗೆ ದೂರು ನೀಡಲಿದೆ.
ಈ ಪ್ರಕರಣದಲ್ಲಿ ಕುಮಾರಸ್ವಾಮಿಯವರೇ ನೇರವಾಗಿ ಲಂಚ ಕೇಳಿರುವುದರಿಂದ ಧ್ವನಿ ಮತ್ತು ದೃಶ್ಯವುಳ್ಳ ಸಿಡಿಯನ್ನು ಪರಿಶೀಲಿಸಿ ಕುಮಾರಸ್ವಾಮಿ ಅವರನ್ನು ತಮ್ಮ ಕೊಠಡಿಗೆ ಕರೆಯಿಸಿ ವಿಚಾರಣೆ ಮಾಡುವಂತೆ ಒತ್ತಾಯಿಸಲಿದ್ದಾರೆ.
ಸೋಮವಾರ ಆಡಳಿತ ಪಕ್ಷದಿಂದ ಆಡಿಯೋ ಕುರಿತ ವಿಷಯ ಪ್ರಸ್ತಾಪವಾದರೆ ಇದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ಹಣ ಕೇಳಿರುವ ಸಿಡಿಯನ್ನು ಪ್ರಸ್ತಾಪಿಸಲು ಬಿಜೆಪಿ ಮುಂದಾಗಿದೆ.
ಈಗಾಗಲೇ ಇದೇ ಸಿಡಿಯನ್ನು ಒಂದು ಬಾರಿ ಬಿಡುಗಡೆಯಾಗಿತ್ತು. ವಿಜಾಪುರದ ಐಬಿಯಲ್ಲಿ ವಿಜುಗೌಡ ಎಂಬುವರನ್ನು ವಿಧಾನಪರಿಷತ್ಗೆ ನೇಮಕ ಮಾಡಲು ಕುಮಾರಸ್ವಾಮಿ 25 ಕೋಟಿ ಹಣ ಕೊಡಬೇಕೆಂದು ಕುಮಾರಸ್ವಾಮಿ ಕೇಳಿದ್ದು ವಿವಾದ ಉಂಟು ಮಾಡಿತ್ತು.
ನಕಲಿ ಆಡಿಯೋ:
ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೋ ನಕಲಿಯಾಗಿದೆ. ಈಗ ಯಾರು ಬೇಕಾದರೂ ಇಂತಹವುಗಳನ್ನು ಸೃಷ್ಟಿಸಬಹುದು. ತಂತ್ರಜ್ಞಾನ ಮುಂದುವರೆದಂತೆ ವಂಚನೆ ಮಾಡುವ ಪ್ರಕರಣಗಳು ಸಾಕಷ್ಟಿವೆ. ಇದು ಕೂಡ ಅದರ ಮುಂದುವರೆದ ಭಾಗ ಎಂದರು.
ಕುಮಾರಸ್ವಾಮಿ ನಮ್ಮ ನಾಯಕರಾದ ಯಡಿಯೂರಪ್ಪ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು.ವಾಸ್ತವವಾಗಿ ನಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಮುಂದಾಗಿದ್ದಾರೆ.
ಇದನ್ನು ಮುಚ್ಚಿ ಹಾಕಲು ನಕಲಿ ಆಡಿಯೋ ಇಟ್ಟುಕೊಂಡು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ.ಕುಮಾರಸ್ವಾಮಿ ಮೂಲತಃ ಚಿತ್ರರಂಗದಿಂದ ಬಂದವರು.ಅದರಲ್ಲೂ ಇಂಥವುಗಳನ್ನು ಸೃಷ್ಟಿಸುವುದರಲ್ಲಿ ನಿಪುಣರು. ಹಾಗಾಗಿ ಇದಕ್ಕೆ ಯಾವುದೇ ಬೆಲೆ ಇಲ್ಲ ಎಂದು ಹೇಳಿದರು.