ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿಯಿಂದ 450 ಕೋಟಿ ರೂ.: ಕೆ.ಸಿ.ವೇಣುಗೋಪಾಲ್

ನವದೆಹಲಿ, ಫೆ.9- ಕರ್ನಾಟಕದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ 450 ಕೋಟಿ ರೂ.ಬಳಕೆ ಮಾಡುತ್ತಿದ್ದು, ಈ ಹಣದ ಮೂಲವನ್ನು ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.

ಆಪರೇಷನ್ ಕಮಲ ಕುರಿತಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಿನ್ನೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್ ಕುರಿತಂತೆ ಇಂದು ದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್ ಸುರ್ಜೆವಾಲಾ ಅವರು, ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರತಿಯೊಬ್ಬ ಶಾಸಕರಿಗೆ ತಲಾ 10 ಕೋಟಿಯಂತೆ 18 ಮಂದಿ ಶಾಸಕರಿಗೆ ಸುಮಾರು 200 ಕೋಟಿ ರೂ. ಹಣ ನೀಡಲಾಗುತ್ತಿದೆ. ಜತೆಗೆ ಸ್ಪೀಕರ್ ಅವರ ಹೆಸರನ್ನು ಆಡಿಯೋ ಕ್ಲಿಪ್‍ನಲ್ಲಿ ಪ್ರಸ್ತಾಪಿಸಲಾಗಿದೆ. ಒಟ್ಟಾರೆ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ 450 ಕೋಟಿ ಖರ್ಚು ಮಾಡುತ್ತಿರುವುದಾಗಿ ಕಂಡು ಬಂದಿದೆ.ಇದು ಕಪ್ಪು ಹಣವೋ, ಬಿಳಿಹಣವೋ ಎಂದು ಸ್ಪಷ್ಟಪಡಿಸಬೇಕು. ಈ ಹಣದ ಮೂಲದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಕೆ.ಸಿ.ವೇಣುಗೋಪಾಲ್ ಅವರು ಮಾತನಾಡಿ, ಕಾಂಗ್ರೆಸ್ -ಜೆಡಿಎಸ್ ಪಕ್ಷವನ್ನು ತೊರೆಯುವ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸದಂತೆ ವಿಧಾನಸಭಾಧ್ಯಕ್ಷರ ಜತೆ ಮಾತುಕತೆ ನಡೆಸಲಾಗಿದೆ. ನ್ಯಾಯಾಲಯದಲ್ಲೂ ನಮ್ಮ ಪರವಾಗಿಯೇ ತೀರ್ಪು ನೀಡುವಂತೆ ನ್ಯಾಯಧೀಶರ ಜತೆಯೂ ಮಾತುಕತೆ ನಡೆಸಲಾಗಿದೆ ಎಂದು ಆಡಿಯೋ ಕ್ಲಿಪ್‍ನಲ್ಲಿ ಬಿಜೆಪಿ ನಾಯಕರು ಹೇಳಿದ್ದಾರೆ.

ಸಚಿವ ಡಿ.ಕೆ.ಶಿವಕುಮಾರ್ ಅವರ ಆದಾಯದ ಮೂಲದ ಬಗ್ಗೆ ಇಂಚಿಂಚೂ ತನಿಖೆ ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಗಳು, ಬಿಜೆಪಿ ಕುದುರೆ ವ್ಯಾಪಾರಕ್ಕಾಗಿ 200 ಕೋಟಿ ಖರ್ಚು ಮಾಡುತ್ತಿರುವುದರ ಬಗ್ಗೆ ಏಕೆ ತನಿಖೆ ನಡೆಸಬಾರದು ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರು ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೂ ಅದನ್ನು ಅತಂತ್ರಗೊಳಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.ಕುದುರೆ ವ್ಯಾಪಾರದ ಮೂಲಕ ಶಾಸಕರ ಖರೀದಿಗೆ ಮುಂದಾಗಿರುವುದು ನಾಚಿಕೆಗೇಡಿನ ವಿಷಯ. ಬಿಜೆಪಿಯ ರಾಷ್ಟ್ರೀಯ ನಾಯಕರು ಈ ರೀತಿಯ ಕೆಟ್ಟ ರಾಜಕಾರಣವನ್ನು ನಿಲ್ಲಿಸಬೇಕು. ಬಿಜೆಪಿ ನಾಯಕರ ಆಡಿಯೋ ಕ್ಲಿಪ್ ಬಗ್ಗೆ ಪ್ರಧಾನಿ ಮೋದಿ ಅವರು ಸ್ಪಷ್ಟನೆ ನೀಡಬೇಕು. ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ರಣದೀಪ್ ಸುರ್ಜೆವಾಲಾ ಮಾತನಾಡಿ, ಅಮಿತ್ ಷಾ, ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನವರಿರುವ ಈ ಮೂವರ ಗ್ಯಾಂಗ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಷಡ್ಯಂತ್ರ ನಡೆಸಿದೆ. ನಾಚಿಕೆಗೇಡಿನ ರಾಜಕಾರಣ ಮಾಡುತ್ತಿದೆ.ಭ್ರಷ್ಟಾಚಾರ ಮಾಡುವುದು, ಲಂಚಕೊಟ್ಟು ಶಾಸಕರನ್ನು ಖರೀದಿಸುವುದು ಅವರ ವ್ಯವಹಾರಗಳಾಗಿವೆ. ಸಮ್ಮಿಶ್ರ ಸರ್ಕಾರ ಪತನಗೊಳಿಸಲು 450 ಕೋಟಿ ಖರ್ಚು ಮಾಡುತ್ತಿದ್ದಾರೆ.ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರ ನೇತೃತ್ವದಲ್ಲೇ ಆಪರೇಷನ್ ಕಮಲ ನಡೆಯುತ್ತಿದೆ ಎಂದು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ