ಬೆಂಗಳೂರು: ನಿನ್ನೆ ಹೆಚ್.ಡಿ. ಕುಮಾರಸ್ವಾಮಿ ಅವರು ಆಪರೇಷನ್ ಕಮಲದ ಆಡಿಯೋವೊಂದನ್ನು ಬಜೆಟ್ಗೆ ಮುಂಚೆ ಬಿಡುಗಡೆ ಮಾಡಿ ಬಿಜೆಪಿಯನ್ನು ಬೇಸ್ತು ಬೀಳಿಸಿದ್ದನ್ನು ನೋಡಿದ್ದೇವೆ. ಇವತ್ತು ಮಾಧ್ಯಮಗಳಿಗೆ ಹೊಸ ಆಡಿಯೋವೊಂದು ಸಿಕ್ಕಿದೆ. ಇದರಲ್ಲಿ ಅತೃಪ್ತ ಶಾಸಕ ಮಹೇಶ್ ಕುಮಟಳ್ಳಿ ಅವರು ಮಾತನಾಡಿರುವ ಈ ಆಡಿಯೋ ಮೈತ್ರಿ ಸರಕಾರಕ್ಕೆ ಶಾಕ್ ಕೊಟ್ಟಿದೆ. ಅಥಣಿ ಕ್ಷೇತ್ರದ ಶಾಸಕರಾದ ಮಹೇಶ್ ಅವರು ತಮ್ಮ ಆಪ್ತರೊಂದಿಗೆ ನಡೆಸಿದ ಈ ದೂರವಾಣಿ ಸಂಭಾಷಣೆಯಲ್ಲಿ ಅವರು ಪಕ್ಷ ನಿಷ್ಠೆಗಿಂತ ಸ್ವಾಮಿ ನಿಷ್ಠೆ ದೊಡ್ಡದು ಎಂದಿದ್ದಾರೆ.
ತಾನು ಶಾಸಕನಾಗಲು ರಮೇಶ್ ಜಾರಕಿಹೊಳಿ ಅವರೇ ಕಾರಣ. ಅವರು ತುಂಬ ಒಳ್ಳೆಯರು. ತಾನು ಕೇವಲ 8 ತಿಂಗಳು ಶಾಸಕನಾಗಿದ್ದರೂ ಪರವಾಗಿಲ್ಲ. ಏನು ಬೇಕಾದರೂ ಆಗಲಿ. ಅವರಿಗೆ ಮೋಸ ಮಾಡಲು ಸಾಧ್ಯವಿಲ್ಲ. ಜನರು ನನ್ನನ್ನು ನಂಬೊಲ್ಲ ಎಂದೆಲ್ಲಾ ಮಹೇಶ್ ಕುಮಟಳ್ಳಿ ಅವರು ತಮ್ಮ ಆಪ್ತರೊಂದಿಗೆ ಹೇಳಿದ್ದಾರೆ.
ಏನಿದೆ ಈ ಆಡಿಯೋದಲ್ಲಿ..?
‘ನಾನು ಮೋಸ ಮಾಡಲ್ಲ’
ಮಹೇಶ್ ಕಮಟಳ್ಳಿ: ಮತ್ತೊಂದು ಕಾಲ್ ಬಂದ್ರೆ ಕಟ್ ಆಗುತ್ತೀರಿ
ಕಮಟಳ್ಳಿ ಆಪ್ತ: ಆ..ಆ..
ಕಮಟಳ್ಳಿ: ಅವರ ಕಾಲ್ ಬಂದ್ರೆ ನಿಂದು ಕಟ್ ಆಗುತ್ತೆ..
ಕಮಟಳ್ಳಿ ಆಪ್ತ : ಹೌದು.. ಹೌದು..
ಮಹೇಶ್ ಕಮಟಳ್ಳಿ: ಬಂದು ವಿಚಾರ ಮಾಡ್ತೀನಿ.
ಕಮಟಳ್ಳಿ ಆಪ್ತ: ಆ..ಆ..
ಮಹೇಶ್ ಕಮಟಳ್ಳಿ: ಫ್ಲೈಟ್ ಬುಕ್ ಮಾಡಿದ್ದೀನಿ..ನಮ್ಮ ಕಡೆ ಎಂಪಿ ಅವರು ಇದ್ದಾರೆ.
ಕಮಟಳ್ಳಿ ಆಪ್ತ: ಆ..ಆ
ಮಹೇಶ್ ಕಮಟಳ್ಳಿ: ಎಲೆಕ್ಷನ್ ನಿಂತ್ರೆ ಖರ್ಚು ಮಾಡ್ತಾರೆ..ಮೋಸ ಮಾಡಲ್ಲ. ಅವರಿಗೆ ಬೇಕಾದವರು ಮಾಡ್ತಾರೆ ಅಂತ ಹೇಳ್ತಾರೆ.. ಅಂಥವರಿಗೆ ಕೈಕೊಟ್ರೆ ಸರಿಯಾಗಲ್ಲ.. ಜನರು ನನ್ನ ನಂಬಲ್ಲ.
ಕಮಟಳ್ಳಿ ಆಪ್ತ: ಅಲ್ಲಿ ಒಂದು ಹಂತಕ್ಕೆ ಬಂದಿದೆಯೇನ್ರೀ..
ಮಹೇಶ್ ಕಮಟಳ್ಳಿ: ಏನು ಗೊತ್ತಿಲ್ಲ ರೀ..ನಮಗೆ ಗೊತ್ತಿಲ್ಲ
ಕಮಟಳ್ಳಿ ಆಪ್ತ: ನೀವು ಅಣ್ಣನ ಜೊತೆ ಇದ್ದೀರಾ..?
ಮಹೇಶ್ ಕಮಟಳ್ಳಿ: ಇಲ್ಲ ನಾನು ಬೇರೆ ಇರ್ತೀನಿ..
ಕಮಟಳ್ಳಿ ಆಪ್ತ: ಆ..ಆ..
ಮಹೇಶ್ ಕಮಟಳ್ಳಿ: ಅವರು ಮಾಡ್ತಾ ಇದ್ದಾರಾ, ಒಳ್ಳೆಯದ್ದೇ ಆಗುತ್ತೆ..
ಕಮಟಳ್ಳಿ ಆಪ್ತ: ಆ..ಆ..
ಕಮಟಳ್ಳಿ: ಅಣ್ಣಾ ಬಂದು ಪ್ರಚಾರ ಮಾಡಿ ನನ್ನ ಗೆಲ್ಲಿಸಿದ್ದಾರೆ. ಅವರು ಒಳ್ಳೆಯವರು..
ಕಮಟಳ್ಳಿ ಆಪ್ತ: ಹೌದು.. ಹೌದು…
ಮಹೇಶ್ ಕಮಟಳ್ಳಿ: ಅಥಣಿ ಕ್ಷೇತ್ರಕ್ಕೆ ತಂದು ನನ್ನನ್ನು ಗೆಲ್ಲಿಸಿದ್ದಾರೆ. ಸಪೋರ್ಟ್ ಮಾಡಿದ್ದಾರೆ.
ಕಮಟಳ್ಳಿ ಆಪ್ತ: ಹೌದು..ಹೌದು…
ಮಹೇಶ್ ಕಮಟಳ್ಳಿ: ನಾನು ಮುಂಬೈ ಬಿಟ್ಟು ಬಂದ್ರೆ ಸರಿ ಇರಲ್ಲ…
ರಮೇಶ್ ಜಾರಕಿಹೊಳಿ, ಬಿ. ನಾಗೇಂದ್ರ, ಮಹೇಶ್ ಕಮಟಳ್ಳಿ ಹಾಗೂ ಉಮೇಶ್ ಜಾಧವ್ ಅವರು ಅತೃಪ್ತರ ಅಗ್ರಸಾಲಿನಲ್ಲಿದ್ದಾರೆ. ಕಾಂಗ್ರೆಸ್ನ ಎರಡು ಶಾಸಕಾಂಗ ಸಭೆಗಳಿಗೂ ಇವರು ಗೈರಾಗಿದ್ದು, ಇವರು ಬಹುತೇಕ ರಾಜೀನಾಮೆ ನೀಡುವ ಹಂತಕ್ಕೆ ಬಂದಿದ್ದಾರೆನ್ನಲಾಗಿದೆ. ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಈ ಅತೃಪ್ತ ಶಾಸಕರ ಪಟ್ಟಿಯಲ್ಲಿ 10-12 ಶಾಸಕರು ಇರಬಹುದೆಂಬ ಅನುಮಾನವಿದೆ. ಜಾರಕಿಹೊಳಿ, ಕುಮಟಳ್ಳಿ ಸೇರಿದಂತೆ ನಾಲ್ವರು ಶಾಸಕರ ಅನರ್ಹತೆಗೆ ಕಾಂಗ್ರೆಸ್ ಪಕ್ಷವು ಪ್ರಯತ್ನಿಸುವ ಸಾಧ್ಯತೆಯೂ ಇದೆ.