ಬೆಂಗಳೂರು, ಫೆ.8- ಪಕ್ಷಾಂತರ ನಿಷೇಧ ಕಾಯ್ದೆಯ ಬ್ರಹ್ಮಾಸ್ತ್ರ ಪ್ರಯೋಗಕ್ಕೂ ಹೆದರದೆ ನಾಲ್ವರು ರೆಬಲ್ ಶಾಸಕರು ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರು ಹಾಜರಾಗುವ ಮೂಲಕ ಪಕ್ಷದ ಶಿಸ್ತಿಗೆ ಸಡ್ಡು ಹೊಡೆದಿದ್ದಾರೆ ಇದನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ.
ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಕರೆಯಲಾಗಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಅತೃಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಗೋಕಾಕ್ ಕ್ಷೇತ್ರದ ರಮೇಶ್ ಜಾರಕಿಹೊಳಿ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ನಾಗೇಂದ್ರ, ಅಥಣಿ ಕ್ಷೇತ್ರದ ಮಹೇಶ್ ಕುಮಟಳ್ಳಿ, ಚಿಂಚೋಳಿ ಕ್ಷೇತ್ರದ ಡಾ.ಉಮೇಶ್ ಜಾಧವ್ ಅವರು ಗೈರು ಹಾಜರಾಗಿದ್ದು, ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಬೇರೆ ಬೇರೆ ಕಾರಣಗಳನ್ನು ನೀಡಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರಾದ ಲಕ್ಷ್ಮೀಹೆಬ್ಬಾಳ್ಕರ್ ಅವರು ಸಂಬಂಧಿಕರ ಮದುವೆಯಲ್ಲಿ ಭಾಗವಹಿಸುವ ಅಗತ್ಯವಿರುವುದರಿಂದ ಶಾಸಕಾಂಗ ಸಭೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ ಎಂದು ಪತ್ರ ಬರೆದಿದ್ದರು.ನಾಯಕರ ಒತ್ತಡಕ್ಕೆ ಮಣಿದು ಕೊನೆ ಕ್ಷಣದಲ್ಲಿ ವಿಮಾನ ಮೂಲಕ ಬಂದು ಶಾಸಕಾಂಗ ಸಭೆಗೆ ಹಾಜರಾಗಿದ್ದಾರೆ.
ರೆಸಾರ್ಟ್ ಬಡಿದಾಟದ ಪ್ರಕರಣದಲ್ಲಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಕಂಪ್ಲಿ ಕ್ಷೇತ್ರದ ಶಾಸಕ ಜಿ.ಎನ್.ಗಣೇಶ್ ಕೂಡ ಗೈರು ಹಾಜರಾಗಿದ್ದಾರೆ.ಶಿವಾಜಿನಗರ ಕ್ಷೇತ್ರದ ರೋಷನ್ ಬೇಗ್, ಹಿರೆಕೆರೂರು ಕ್ಷೇತ್ರದ ಬಿ.ಸಿ.ಪಾಟೀಲ್ ಕೂಡ ಶಾಸಕಾಂಗ ಸಭೆಯಿಂದ ದೂರ ಉಳಿದಿದ್ದಾರೆ.
ಉಳಿದ ನಾಲ್ವರು ಅತೃಪ್ತರ ಗೈರು ಹಾಜರಿಯನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷ ಗಂಭೀರವಾಗಿ ಪರಿಗಣಿಸಿದೆ.
ಈ ಮೊದಲು ಕರೆಯಲಾಗಿದ್ದ ಶಾಸಕಾಂಗ ಸಭೆಗೂ ನಾಲ್ವರು ಗೈರು ಹಾಜರಾಗಿದ್ದರು.ಆನಂತರ ವಿಧಾನಸಭೆ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ವಿಪ್ ನೀಡಲಾಗಿತ್ತು. ಅದನ್ನೂ ಕೂಡ ಉಲ್ಲಂಘಿಸಿದ್ದಾರೆ.
ಇಂದಿನ ಶಾಸಕಾಂಗ ಸಭೆಯಲ್ಲಿ ಭಾಗವಹಿಸುವಂತೆ ವಿಪ್ ನೀಡಲಾಗಿತ್ತು.ಒಟ್ಟು ಮೂರು ಬಾರಿ ನೀಡಲಾಗಿರುವ ವಿಪ್‍ಗಳನ್ನು ನಾಲ್ವರು ಅತೃಪ್ತರು ಉಲ್ಲಂಘಿಸಿದ್ದು, ಇದನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಿಸ್ತು ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.
ಈಗಾಗಲೇ ಮುಂಬೈನ ಹೋಟೆಲ್‍ನಲ್ಲಿ ಬಿಜೆಪಿ ನಾಯಕರೊಂದಿಗೆ ಬಿಡಾರ ಹೂಡಿರುವ ಈ ನಾಲ್ವರು ಶಾಸಕರ ಪೈಕಿ ನಾಗೇಂದ್ರ ಅವರು ಕೋರ್ಟ್ ವ್ಯವಹಾರಕ್ಕಾಗಿ ಬೆಂಗಳೂರಿಗೆ ಬಂದು ಹೋಗಿದ್ದು, ಉಮೇಶ್ ಜಾಧವ್ ಮತ್ತು ಮಹೇಶ್ ಕುಮಟಳ್ಳಿ ಒಂದೆರಡು ಬಾರಿ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಕಳೆದ ಒಂದು ತಿಂಗಳಿನಿಂದಲೂ ಅಜ್ಞಾತವಾಗಿದ್ದು, ಯಾರ ಕೈಗೂ ಸಿಗುತ್ತಿಲ್ಲ.
ಹಲವಾರು ಬಾರಿ ವಿಪ್ ಹಾಗೂ ನೋಟಿಸ್ ನೀಡಿ, ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಸ್ಪಂದಿಸದೇ ಇರುವ ಈ ನಾಲ್ವರು ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಅವರಿಗೆ ಇಂದು ದೂರು ನೀಡಲಾಗುತ್ತದೆ ಎಂದು ಹೇಳಲಾಗಿದೆ.