ಬೆಂಗಳೂರು,ಫೆ.7-ಶತಾಯಗತಾಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಪ್ರತಿಪಕ್ಷ ಬಿಜೆಪಿ ನಾಳೆ ಅತೃಪ್ತ ಶಾಸಕರ ರಾಜೀನಾಮೆ ಕೊಡಿಸುವ ಮೂಲಕ ಸರ್ಕಾರಕ್ಕೆ ಖೆಡ್ಡ ತೋಡಲು ಸಜ್ಜಾಗಿದೆ.
ಹಣಕಾಸು ಖಾತೆಯನ್ನುಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾಳೆ ಬಜೆಟ್ ಮಂಡನೆ ಮಾಡಲಿದ್ದಾರೆ. ಇದಕ್ಕೂ ಮುನ್ನವೇ ಭಿನ್ನಮತೀಯ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಬಜೆಟ್ ಮಂಡನೆಯಾದರೆ ಸರ್ಕಾರಕ್ಕೆ ಕೀರ್ತಿ ಸಿಗುತ್ತದೆ ಎಂಬ ಹಿನ್ನೆಲೆಯಲ್ಲಿ 7-10 ಶಾಸಕರಿಂದ ರಾಜೀನಾಮೆ ಕೊಡಿಸಲು ಬಿಜೆಪಿ ಮುಂದಾಗಿದೆ.ನಾಳೆ ಈ ಸುದ್ದಿಯೇ ಪ್ರಧಾನವಾಗಿ ಬಜೆಟ್ ಸುದ್ದಿ ಹಳ್ಳ ಹಿಡಿಸುವ ಕಾರಣಕ್ಕಾಗಿ ಬಿಜೆಪಿ ಈ ತಂತ್ರ ರೂಪಿಸಿದೆ.
ಕಾಂಗ್ರೆಸ್ನ ಭಿನ್ನಮತೀಯ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಿ.ನಾಗೇಂದ್ರ, ಉಮೇಶ್ ಜಾಧವ್, ಬಿ.ಸಿ.ಪಾಟೀಲ್, ಪ್ರತಾಪ್ಗೌಡ ಪಾಟೀಲ್, ಬಸವರಾಜ್ ದದ್ದಲ್ ಸೇರಿದಂತೆ ಮತ್ತತರರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸದ್ಯಕ್ಕೆ ಈ ಎಲ್ಲರೂ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದು, ಇಂದು ಸಂಜೆ ಅಥವಾ ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಂತರ ವಿಧಾನಸಭೆಯ ಸ್ಪೀಕರ್ ರಮೇಶ್ಕುಮಾರ್ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಅಧಿಕೃತವಾಗಿ ಸಲ್ಲಿಸಲಿದ್ದಾರೆ.
ಬಂಡೆದ್ದಿರುವ ಭಿನ್ನಮತೀಯರನ್ನು ಹತ್ತಿಕ್ಕಲು ಕಾಂಗ್ರೆಸ್ ಅನರ್ಹತೆಯ ಬ್ರಹ್ಮಾಸ್ತ್ರವನ್ನು ಬಳಸಲು ಮುಂದಾಗಿರುವುದರಿಂದ ಅದಕ್ಕೂ ಮುನ್ನವೇ ಈ ಎಲ್ಲಾ ಶಾಸಕರು ರಾಜೀನಾಮೆ ಕೊಡಲಿದ್ದಾರೆ.
ಭಿನ್ನಮತೀಯ ಶಾಸಕರ ಜೊತೆ ಬಿಜೆಪಿಯ ಡಾ.ಅಶ್ವಥ್ ನಾರಾಯಣ, ಬಾಲಚಂದ್ರ ಜಾರಕಿಹೊಳಿ ಮತ್ತಿತರರು ಕೈ ಜೋಡಿಸಿದ್ದು, ಅವರನ್ನು ಬೆಂಗಳೂರಿಗೆ ಕರೆತರುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದಾರೆ.
ಜೆಡಿಎಸ್ನ ಕೆಆರ್ಪೇಟೆ ಶಾಸಕ ನಾರಾಯಣಗೌಡ ಅವರ ಮುಂದಿನ ನಡೆ ಏನೆಂಬುದು ಇದುವರೆಗೂ ದೃಢಪಟ್ಟಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವರೋ ಇಲ್ಲವೇ ಪಕ್ಷದ ವರಿಷ್ಠರ ಮಾತಿಗೆ ಕಟ್ಟುಬಿದ್ದು ಹಿಂತಿರುಗುವರೋ ಎಂಬುದು ಗೊತ್ತಾಗುತ್ತಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಒಂದು ವೇಳೆ ಎಲ್ಲವೂ ನಿರೀಕ್ಷೆಯಂತೆ ನಡೆದು ನಾಳೆ ಭಿನ್ನಮತೀಯರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಸಮ್ಮಿಶ್ರ ಸರ್ಕಾರ ಸಂಕಷ್ಟಕ್ಕೆ ಸಿಲುಕುತ್ತದೆ. ಅಲ್ಲದೆ ಬಜೆಟ್ಗೂ ಯಾವುದೇ ಮಾನ್ಯತೆ ಸಿಗುವುದಿಲ್ಲ. ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ ಎಂದು ಪ್ರತಿಪಕ್ಷ ಬಿಜೆಪಿ ಕುಮಾರಸ್ವಾಮಿಯವರ ರಾಜೀನಾಮೆಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಹೋರಾಟ ನಡೆಸಲು ಸಜ್ಜಾಗಿದೆ.
ಈ ಶಾಸಕರ ನಡೆ ಸಮ್ಮಿಶ್ರ ಸರ್ಕಾರದ ಅಳಿವು-ಉಳಿವನ್ನು ತೀರ್ಮಾನಿಸಲಿದೆ.