ಸದನದಲ್ಲಿ ಶ್ರೀಗಳು ಮತ್ತು ಆಗಲಿದ ಇತರ ಗಣ್ಯರಿಗೆ ಶ್ರದ್ದಾಂಜಲಿ ಸಲ್ಲಿಕೆ

ಬೆಂಗಳೂರು, ಫೆ.6- ಲಿಂಗೈಕ್ಯರಾದ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವಕುಮಾರಸ್ವಾಮೀಜಿ, ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡೀಸ್, ವಿಧಾನಸಭೆಯ ಮಾಜಿ ಸದಸ್ಯ ದತ್ತುಯಲ್ಲಪ್ಪ ಹಕ್ಯಾಗೋಳ್, ಸಾಲೇರ ಎಸ್.ಸಿದ್ದಪ್ಪ ಅವರ ನಿಧನಕ್ಕೆ ಸದನದಲ್ಲಿ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ ನಂತರ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷ ರಮೇಶ್‍ಕುಮಾರ್ ಸಂತಾಪ ಸೂಚನಾ ನಿರ್ಣಯ ಮಂಡಿಸಿ ಸಿದ್ದಗಂಗಾ ಮಠಾಧೀಶರಾದ ಶಿವಕುಮಾರಸ್ವಾಮೀಜಿ 1930ರಲ್ಲಿ ಸಿದ್ದಗಂಗಾದ ಉತ್ತರಾಧಿಕಾರಿಯಾಗಿ ನೇಮಕಗೊಂಡು 89 ವರ್ಷಗಳ ಕಾಲ ಪರಮಶ್ರೇಷ್ಠ ಸಂತರಾಗಿ ಮಠವನ್ನು ಮುನ್ನಡೆಸಿದರು. ಶಾಂತಿಯ ಬೀಡಾಗಿಸಿ, ತ್ರಿವಿಧ ದಾಸೋಹಿಯಾಗಿ ಅನಕ್ಷರತೆ, ಬಡತನ, ಅಸಮಾನತೆಯನ್ನು ಹೋಗಲಾಡಿಸಲು ಅವಿರತವಾಗಿ ಶ್ರಮಿಸಿದರು.ಉತ್ತರದಲ್ಲಿ ಗಂಗೆ ಇದ್ದಂತೆ ದಕ್ಷಿಣದಲ್ಲಿ ಸಿದ್ದಗಂಗೆಯನ್ನು ಪ್ರಖ್ಯಾತಿಗೊಳಿಸಿ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರವನ್ನಾಗಿಸಲು ಅವಿಶ್ರಾಂತ ಸೇವೆ ಹಾಗೂ ತ್ಯಾಗದ ಪ್ರತಿ ರೂಪ ವೆಸಿದ್ದರು ಎಂದು ಬಣ್ಣಿಸಿದರು.

ಕರ್ನಾಟಕ, ಬೆಂಗಳೂರು ಹಾಗೂ ತುಮಕೂರು ವಿವಿಗಳಿಂದ ಡಾಕ್ಟರೇಟ್, ಕರ್ನಾಟಕ ರತ್ನ, ಪದ್ಮಭೂಷಣ ಪ್ರಶಸ್ತಿ ಪಡೆದ ಜೀವಮಾನದ ಸಾಧನೆ ಮನುಕುಲಕ್ಕೆ ಒಂದು ಸಂದೇಶ ಎಂದು ಗುಣಗಾನ ಮಾಡಿದರು.

ಸಭಾಧ್ಯಕ್ಷರ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿದ್ದಗಂಗಾ ಮಠದಲ್ಲಿ ಶ್ರೇಷ್ಠ ಸಂತರಾಗಿ ಬದ್ಧತೆಯಿಂದ ಯಾವುದೇ ಜಾತಿಗೆ ಸೀಮಿತರಾಗದೆ ಬಡ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ದೇಶಕ್ಕೆ ಮಾದರಿಯಾದವರು ಸಿದ್ದಗಂಗಾ ಶ್ರೀಗಳು.ಹಲವು ಕುಟುಂಬಗಳ ಬದುಕಿಗೆ ದಾರಿ ದೀಪವಾಗಿದ್ದ ಅವರ ಸರಳ ಜೀವನದಿಂದ ರಾಜಕೀಯದ ಸೋಂಕಿಗೆ ಎಂದಿಗೂ ದೂಡಿಕೊಂಡಿರಲಿಲ್ಲ. ಕಿರಿಯ ವಯಸ್ಸಿನಲ್ಲೇ ದೀಕ್ಷೆ ಪಡೆದು ಗುರು ಪರಂಪರೆಯನ್ನು ಎತ್ತಿ ಹಿಡಿದ ಮಹಾನೀಯರು.ಕರ್ನಾಟಕ ರತ್ನ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಿದ್ದು ನಮ್ಮ ಪೂರ್ವ ಜನ್ಮದ ಪುಣ್ಯ ಎಂದು ಸ್ಮರಿಸಿದರು.

ಕಾರ್ಮಿಕ ಸಂಘಟನೆಯ ನೇತಾರರಾಗಿ ಜಾರ್ಜ್ ಫರ್ನಾಂಡೀಸ್ ನೀಡಿದ್ದ ಕೊಡುಗೆ ಅಪಾರ.8 ಬಾರಿ ಲೋಕಸಭೆಗೆ ಆಯ್ಕೆಯಾಗಿ ಹಲವಾರು ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು.ರಾಜ್ಯಕ್ಕೆ ಕೊಂಕಣ ರೈಲ್ವೆ ಕೊಟ್ಟ ಅವರು ರಕ್ಷಣಾ ಸಚಿವರಾಗಿಯೂ ಅಪಾರ ಸೇವೆ ಸಲ್ಲಿಸಿದ್ದರು.

ಚಿಕ್ಕೋಡಿ ಶಾಸಕರಾಗಿದ್ದ ದತ್ತು ಯಲ್ಲಪ್ಪ ವೃತ್ತಿಯಲ್ಲಿ ಕೃಷಿಕರಾಗಿದ್ದರು. ಕ್ಷೇತ್ರದ ಸೇವೆಗೆ ತಮ್ಮನ್ನೇ ಮುಡುಪಾಗಿಟ್ಟಿದ್ದರು.ಸಾಲೇರ ಎಸ್.ಸಿದ್ದಪ್ಪ ಅವರು ಭದ್ರಾವತಿ ತಾಲ್ಲೂಕಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದರು ಎಂದು ತಿಳಿಸಿದರು.

ವಿರೋಧಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಶಿವಕುಮಾರಸ್ವಾಮೀಜಿ ಜಗತ್ತು ಕಂಡ ಶ್ರೇಷ್ಠ ದಾರ್ಶನಿಕರು. ಶ್ರೀಗಳಿಗೆ ಸಂತಾಪ ಪದ ಬಳಕೆ ಸಮಂಜಸವಲ್ಲ ಲಿಂಗೈಕ್ಯರಾಗಿದ್ದಾರೆ.ಆ ದಿವ್ಯ ಚೇತನ ನಮಗೆ ದಾರಿ ತೋರುತ್ತದೆ ಎಂಬುದು ನಮ್ಮ ಭಾವನೆ. ಅವರು ಶಿವೈಕ್ಯರಾಗಿರುವುದು ರಾಜ್ಯಕ್ಕೆ ತುಂಬಲಾರದ ನಷ್ಟ.ಸಹಸ್ರಾರು ಭಕ್ತರಿಗೆ ಉತ್ತಮ ಮಾರ್ಗದರ್ಶಕರಾಗಿದ್ದ ಅವರನ್ನು ನಾವು ಕಳೆದುಕೊಂಡ ನೋವಿದೆ ಎಂದು ಗುಣಗಾನ ಮಾಡಿದರು.

ಕನ್ನಡಿಗರಾಗಿ ರಾಷ್ಟ್ರ ರಾಜಕಾರಣದಲ್ಲಿ ಜಾರ್ಜ್‍ಫರ್ನಾಂಡೀಸ್ ಅವರು ಮಾಡಿದ ಕೆಲಸಗಳು ಪವಾಡವೇ ಸರಿ. ಮುಂಬೈಗೆ ಹೋದ ಅವರು ರಾಜಕಾರಣದಲ್ಲಿ ವಿಸ್ಮಯವನ್ನೇ ಮೂಡಿಸಿದರು ಎಂದರು.

ವಿಧಾನಸಭೆ ಮಾಜಿ ಸದಸ್ಯರಾದ ದತ್ತುಯಲ್ಲಪ್ಪ ಹಕ್ಯಾಗೋಳ್ ಮತ್ತು ಸಾಲೇರ ಎಸ್.ಸಿದ್ದಪ್ಪ ಅವರಿಗೆ ಸಂತಾಪ ಸೂಚಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಶಿವಕುಮಾರಸ್ವಾಮೀಜಿಯವರು 89 ವರ್ಷಗಳ ಕಾಲ ನಿರಂತರವಾಗಿ ಮಾಡಿರುವ ಧಾರ್ಮಿಕ ಸೇವೆ ಯಾರೂ ಮಾಡಲಾಗದ್ದು, ಬುದ್ದನ ಕಾರುಣ್ಯ, ಬಸವಣ್ಣನ ಸಮಾನತೆ, ಜಾತಿ ಹಾಗೂ ವರ್ಗ ರಹಿತ ಸಮಾಜದ ಕನಸು ಕಂಡಿದ್ದ ಶಿವಕುಮಾರಸ್ವಾಮೀಜಿಗಳ ಸೇವೆ ಅನನ್ಯ. ಶಿಕ್ಷಣ, ಅನ್ನ, ಆಶ್ರಯ ನೀಡುವುದು ಸಾಮಾನ್ಯದ ಕೆಲಸವಲ್ಲ ಎಂದು ಹೇಳಿದರು.

ಜಾರ್ಜ್ ಫರ್ನಾಂಡೀಸ್ ಅವರು ನನ್ನ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಹತ್ತು ಸಾವಿರ ರೂ.ಆರ್ಥಿಕ ನೆರವು ನೀಡಿದ್ದರು.ಅಲ್ಲದೆ, ಪ್ರಚಾರಕ್ಕೂ ಆಗಮಿಸಿ ಬೆಂಬಲವಾಗಿ ನಿಂತಿದ್ದರು. ಸರಳ ಪ್ರಾಮಾಣಿಕ ವ್ಯಕ್ತಿಯಾಗಿ ರಾಜಕಾರಣದಲ್ಲಿ ಉತ್ತಮ ಸೇವೆ ಮಾಡಿದರು ಎಂದು ಸ್ಮರಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಸೇರಿದಂತೆ ಅನೇಕ ಸದಸ್ಯರು ಸಂತಾಪ ಸೂಚನಾ ನಿರ್ಣಯಕ್ಕೆ ಬೆಂಬಲಿಸಿ ಮಾತನಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ