ಜಂಟಿ ಅಧಿವೇಧಶನದ ಮೊದಲ ದಿನವೇ ಗೈರು ಹಾಜರಾದ 10ಕ್ಕೂ ಹೆಚ್ಚುಆಡಳಿತಾರೂಢ ಶಾಸಕರು- ನಾಳೆ ರಾಜೀನಾಮೆ

ಬೆಂಗಳೂರು, ಫೆ. 6: ವಿಧಾನ ಮಂಡಲ ಜಂಟಿ ಅಧಿವೇಶನದ ಮೊದಲ ದಿನವೇ ಆಡಳಿತಾರೂಢ ಸರಕಾರದ 10ಕ್ಕೂ ಹೆಚ್ಚು ಶಾಸಕರು ಗೈರು ಹಾಜರಾಗಿರುವುದು ಹಲವು ಸಂಶಯಗಳನ್ನು ಸೃಷ್ಟಿಸಿದೆ.ಈ ಮಧ್ಯೆ ಕಳೆದ ಶಾಸಕಾಂಗ ಸಭೆಗೆ ಗೈರು ಹಾಜರಾಗಿದ್ದ ನಾಲ್ವರು ಶಾಸಕರು ನಾಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಯಾವುದೇ `ಆಪರೇಷನ್ ಕಮಲ’ ಮಾಡುವುದಿಲ್ಲ. ರಾಜ್ಯಪಾಲರ ಭಾಷಣಕ್ಕೂ ನಾವು ಅಡ್ಡಿಪಡಿಸುವುದಿಲ್ಲ ಎಂಬ ವಿಪಕ್ಷ ಯಡಿಯೂರಪ್ಪ ಹೇಳಿಕೆ ಸುಳ್ಳಾಗಿದೆ. ವಿಪ್ ಉಲ್ಲಂಘಿಸಿ ಆಡಳಿತ ಪಕ್ಷದ ಶಾಸಕರೆ ಸದನಕ್ಕೆ ಗೈರಾಗಿರುವುದು `ಆಪರೇಷನ್ ಕಮಲ’ದ ಅನುಮಾನವನ್ನು ಮೂಡಿಸಿದೆ.
ವಿಧಾನ ಮಂಡಲ ಜಂಟಿ ಅಧಿವೇಶನ (ಫೆ.6)ಆರಂಭದಿಂದ ಫೆ.15ರ ವರೆಗೆ ಎಲ್ಲ ಸದಸ್ಯರು ಸದನದಲ್ಲಿ ಕಡ್ಡಾಯವಾಗಿ ಹಾಜರಿದ್ದು, ಸರಕಾರದ ಪರ ಮತ ಹಾಕಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಪ್ ಜಾರಿ ಮಾಡಿದ್ದರು.

ಆದರೆ, ವಿಪ್ ಉಲ್ಲಂಘಿಸಿ ಕಾಂಗ್ರೆಸಿನ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ (ಗೋಕಾಕ್ ಕ್ಷೇತ್ರ), ಮಹೇಶ್ ಕುಮಟಳ್ಳಿ(ಅಥಣಿ), ಬಿ.ನಾಗೇಂದ್ರ (ಬಳ್ಳಾರಿ ಗ್ರಾಮೀಣ) ಮತ್ತು ಡಾ.ಉಮೇಶ್ ಜಾಧವ್ (ಚಿಂಚೋಳಿ) ಗೈರು ಹಾಜರಾಗಿದ್ದರು.ನಾಳೆ ಈ ನಾಲ್ವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ ಎಂಬ ವದ್ಧಂತಿಗಳು ಹರಿದಾಡುತ್ತಿವೆ.

ರೆಸಾರ್ಟ್ ಬಡಿದಾಟ ಪ್ರಕರಣದಲ್ಲಿ ಆರೋಪಿಯಾಗಿ ಬಂಧನ ಭೀತಿಯಲ್ಲಿರುವ ಜೆ.ಎನ್.ಗಣೇಶ್(ಕಂಪ್ಲಿ) ಕೂಡ ಸದನಕ್ಕೆ ಗೈರು ಹಾಜರಾಗಿದ್ದಾರೆ. ಜೊತೆಗೆ ಬಿ.ಸಿ.ಪಾಟೀಲ್ (ಹಿರೇಕೆರೂರು), ಡಾ.ಸುಧಾಕರ್(ಚಿಕ್ಕಬಳ್ಳಾಪುರ), ಸೌಮ್ಯರೆಡ್ಡಿ ಹಾಗೂ ಜೆಡಿಎಸ್‍ನ ನಾರಾಯಣಗೌಡ(ಕೆ.ಆರ್.ಪೇಟೆ) ಸೇರಿದಂತೆ 9 ಮಂದಿ ಅಧಿವೇಶನದಿಂದ ದೂರು ಉಳಿದಿದ್ದರು.

ಜತೆಗೆ ಮೈತ್ರಿ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದು ಬಿಜೆಪಿ ವಲಯದಲ್ಲಿ ಗುರುತಿಸಿಕೊಂಡಿದ್ದ ಪಕ್ಷೇತರ ಶಾಸಕರಾದ ಆರ್.ಶಂಕರ್(ರಾಣೆಬೆನ್ನೂರು), ನಾಗೇಶ್ (ಮುಳಬಾಗಿಲು) ಅವರು ಜಂಟಿ ಅಧಿವೇಶನಕ್ಕೆ ಗೈರು ಹಾಜರಾಗಿದ್ದು, ಮುಂದೆ ಏನು ಎಂಬ ಕುತೂಹಲ ಸೃಷ್ಟಿಸಿದೆ.

ಬಜೆಟ್ ಅಧಿವೇಶನ ಮುಗಿಯುವುದರೊಳಗೆ ಮೈತ್ರಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಅಥವಾ ಲೇಖಾನುದಾನಕ್ಕೆ ಒಪ್ಪಿಗೆ ಪಡೆದುಕೊಳ್ಳುವ ವೇಳೆ ಅತೃಪ್ತ ಶಾಸಕರನ್ನು ಗೈರುಹಾಜರಾಗುವಂತೆ ಮಾಡುವ ಮೂಲಕ ಸರಕಾರ ಅಸ್ಥಿರಕ್ಕೆ ಬಿಜೆಪಿ ರಣತಂತ್ರ ರೂಪಿಸಿದೆ ಎಂಬ ಸುದ್ಧಿ ವಿಧಾನಸಭೆ ಮೊಗಸಾಲೆಯಲ್ಲಿ ಸುಳಿದಾಡುತ್ತಿದೆ.

ಬಿಜೆಪಿ ಶಾಸಕರೂ ಗೈರು: ವರ್ಷದ ಮೊದಲ ಅಧಿವೇಶನಕ್ಕೆ ವಿಪಕ್ಷ ಬಿಜೆಪಿಯ ಡಾ.ಅಶ್ವಥ್ ನಾರಾಯಣ್(ಮಲ್ಲೇಶ್ವರಂ), ಬಾಲಚಂದ್ರ ಜಾರಕಿಹೊಳಿ (ಅರಭಾವಿ), ಎನ್.ಲಿಂಗಣ್ಣ(ಮಾಯಕೊಂಡ), ಬಸನಗೌಡ ಪಾಟೀಲ್ ಯತ್ನಾಳ್ (ವಿಜಯಪುರ ನಗರ), ದೊಡ್ಡನಗೌಡ ಪಾಟೀಲ್(ಹುನಗುಂದ), ಕರುಣಾಕರ ರೆಡ್ಡಿ (ಹರಪ್ಪನಹಳ್ಳಿ) ಸೇರಿದಂತೆ ಆರು ಮಂದಿ ಶಾಸಕರು ಗೈರು ಹಾಜರಾಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ