ಸಾಲಾಮನ್ನಾ ಯೋಜನೆಯಡಿ 3.28 ಲಕ್ಷ ರೈತರ ಸಾಲಾ ಮನ್ನಾ: ರಾಜ್ಯಪಾಲ ವಜುಭಾಯಿ ವಾಲಾ

ಬೆಂಗಳೂರು, ಫೆ.6- ಬೆಳೆ ಸಾಲ ಮನ್ನಾ ಯೋಜನೆಯಡಿ ಈ ವರ್ಷದ ಜನವರಿ 31ರ ವೇಳೆಗೆ 3.28 ಲಕ್ಷ ರೈತರ ಬೆಳೆ ಸಾಲ ಮನ್ನಾ ಮಾಡಲಾಗಿದ್ದು, ಅದಕ್ಕಾಗಿ 1611 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿರುವ ಅವರು, ರಾಜ್ಯ ಸರ್ಕಾರ ನೂತನ ಬೆಳೆ ಸಾಲ ಮನ್ನಾ ಯೋಜನೆಯನ್ನು ಮನಃಪೂರ್ವಕವಾಗಿ ಪ್ರಾರಂಭಿಸಿದೆ. ಸಹಕಾರ ಸಂಘಗಳು ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ಬಾಕಿ ಇರುವ ಎಲ್ಲಾ ಅರ್ಹ ರೈತರ ಬೆಳೆ ಸಾಲವನ್ನು ಮನ್ನಾ ಮಾಡುವ ಗುರಿಯೊಂದಿಗೆ ಯೋಜನೆ ಅನುಷ್ಠಾನವನ್ನು ತ್ವರಿತಗೊಳಿಸಲಾಗುತ್ತಿದೆ ಎಂದರು.

ದೇಶಕ್ಕೆ ಮಾದರಿಯಾಗಿರುವ ರಾಜ್ಯದ ಕೃಷಿ ಮಾರುಕಟ್ಟೆಗಳ ಆನ್‍ಲೈನ್ ಮತ್ತು ಏಕೀಕೃತ ಮಾರುಕಟ್ಟೆ ವ್ಯವಸ್ಥೆಯಿಂದ ರೈತರ ಆದಾಯ ಶೇ.38ರಷ್ಟು ಹೆಚ್ಚಾಗಿದೆ ಎಂದಿರುವ ರಾಜ್ಯಪಾಲರು, ಇಲ್ಲಿಯವರೆಗೂ 1.25ಲಕ್ಷ ಕೋಟಿ ಮೌಲ್ಯದ 5.48 ಕೋಟಿ ಮೆಟ್ರಿಕ್‍ಟನ್‍ಗಳಷ್ಟು ಕೃಷಿ ಉತ್ಪನ್ನಗಳ ವಹಿವಾಟನ್ನು ಎಪಿಎಂಸಿ ನಡೆಸಿದೆ ಎಂದರು.

ಪ್ರಸ್ತುತ ಕೃಷಿ ಉತ್ಪನ್ನಗಳ ಬಾಳಿಕೆಯನ್ನು ಹೆಚ್ಚಿಸುವ ಸಲುವಾಗಿ ಇರೇಡಿಏಷನ್ (ವಿಕಿರಣ) ಘಟಕಗಳ ಸೇವೆ ಮತ್ತು ಸ್ವಚ್ಛತೆ, ಶ್ರೇಣೀಕರಣ, ಪ್ಯಾಕಿಂಗ್‍ನಂತಹ ಮೌಲ್ಯವರ್ಧಿತ ಸೇವಾ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ.

ತೋಟಗಾರಿಕೆ ಪ್ರದೇಶವನ್ನು 42ಸಾವಿರ ಹೆಕ್ಟೇರ್‍ಗಳಿಗೆ ವಿಸ್ತರಿಸಲು ಮತ್ತು ಉತ್ಪನ್ನಗಳನ್ನು ಹೆಚ್ಚಿಸುವ ಸಲುವಾಗಿ ಅರ್ಹ ರೈತರಿಗೆ ನೆರವು ನೀಡಲಾಗಿದೆ. 51.49ಲಕ್ಷ ಸಸಿ ವಿತರಿಸಲಾಗಿದೆ.ಪಾಲಿಹೌಸ್‍ಗಳಿಗಾಗಿ 60ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ.

ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದ್ದು, 2018-19ನೇ ಸಾಲಿನಲ್ಲಿ ಬೆಲೆ ಇಳಿಕೆ ಕಂಡಿದ್ದರಿಂದ ರಕ್ಷಣಾತ್ಮಕ ದರಗಳನ್ನು ಸರ್ಕಾರ ನೀಡಿ 1.30ಲಕ್ಷ ರೈತ ಕುಟುಂಬಗಳ ಮತ್ತು 7ಸಾವಿರ ನೇಯ್ಗೆ ಕುಟುಂಬಗಳ ಹಿತರಕ್ಷಣೆ ಮಾಡಲಾಗಿದೆ.

ಮತ್ಸ್ಯ ಜೋಪಾನ ಯೋಜನೆಯಡಿ 10 ಶಿಥಲೀಕರಣ ಘಟಕಗಳನ್ನು ಸ್ಥಾಪಿಸಿ ಮೀನುಗಾರಿಕೆಯನ್ನು ಉತ್ತೇಜಿಸಲಾಗಿದೆ.ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಕೊಡಬೇಕಾಗಿದ್ದ 2135 ಕೋಟಿ ರೂ.ಗಳ ಬಾಕಿಯನ್ನು ಬಹುತೇಕ ಕೊಡಿಸಿ ಜನವರಿ ಅಂತ್ಯದ ವೇಳೆಗೆ ಕೇವಲ 5 ಕೋಟಿ ಮಾತ್ರ ಬಾಕಿ ಇರುವಂತೆ ನೋಡಿಕೊಂಡಿದೆ.ಪ್ರಸಕ್ತ ಹಂಗಾಮಿನಲ್ಲಿ ಕಬ್ಬಿನ ದರದ ಎಫ್‍ಆರ್‍ಪಿಯನ್ನು ಒಂದೇ ಕಂತಿನಲ್ಲಿ ಸಂದಾಯ ಮಾಡುವಂತೆ ಸಕ್ಕರೆ ಕಾರ್ಖಾನೆಗಳುಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ