ಸರ್ಕಾರದಿಂದ ಬೇಡಿಕೆಗಳನ್ನು ಈಡೇರಿಸುವ ಭರವಸೆ ಹಿನ್ನಲೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಾಪಸ್

ಬೆಂಗಳೂರು, ಫೆ.5-ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಎರಡು ದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.

ವೇತನ ಹೆಚ್ಚಳ ಕಾರ್ಯಭಾರ ಒತ್ತಡ ಕಡಿಮೆ ಮಾಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕಳೆದ ಎರಡು ದಿನಗಳಿಂದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ಹಿಂಪಡೆದಿದ್ದಾರೆ.

ಈ ಕುರಿತು ಮಾತನಾಡಿರುವ ಅಂಗನವಾಡಿ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷೆ ಜಯಲಕ್ಷ್ಮಿ ಅವರು, ಒಮ್ಮತದ ತೀರ್ಮಾನದಿಂದ ಪ್ರತಿಭಟನೆಯನ್ನು ಹಿಂಪಡೆದಿದ್ದೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ಸರ್ಕಾರದಿಂದ ದೊರೆತಿದೆ.ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆ ಮತ್ತು ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರಿಗೆ ಮನವಿ ಮಾಡಿದ್ದೇವೆ. ನಮ್ಮ ಬೇಡಿಕೆಗಳನ್ನು ಬಜೆಟ್‍ನಲ್ಲಿ ಅಳವಡಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಫ್ರೀಡಂಪಾರ್ಕ್‍ನಲ್ಲಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಜಯಮಾಲಾ ಅವರು ಭೇಟಿ ನೀಡಿ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿ ಅವರ ಅಹವಾಲುಗಳನ್ನು ಸ್ವೀಕರಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ